ಜಿಲ್ಲೆ

ನಿವೃತ್ತ ಸರ್ಕಾರಿ ನೌಕರರಿಗೂ 7ನೇ ವೇತನದ ಅನುಕೂಲತೆಗಳನ್ನು ವಿತರಿಸಲು ಆಗ್ರಹಿಸಿ ಪ್ರತಿಭಟನೆ: ಶಂಕರ ಹೂಗಾರ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ, ಗದಗ
2022 ಜು.1 ರಿಂದ 2024 ಜು.31ರ ಅವಧಿಯಲ್ಲಿ ಸರ್ಕಾರಿ ವೃತ್ತಿಯಿಂದ ನಿವೃತ್ತರಾದವರಿಗೆ ಗಳಿಕೆ ರಜೆ ನಗದೀಕರಣ, ಡಿಸಿಆರ್​ಜೆ, ಕಮ್ಯುಟೇಶನ್​ ಮೊತ್ತವನ್ನು ಏಳನೆ ವೇತನ ಆಯೋಗದ ಲೆಕ್ಕಾಚಾರ ನೀಡಬೇಕು ಎಂದು ಒತ್ತಾಯಿಸಿ, ಅ.1 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಕಪ್ಪುಪಟ್ಟಿ ಕಟ್ಟಿಕೊಂಡು ಧರಣಿ ನಡೆಸಲಾಗುವುದು ಎಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆ ಜಿಲ್ಲಾ ಸಂಚಾಲಕ ಶಂಕರ ಹೂಗಾರ ಹೇಳಿದರು.
ಭಾನುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬೇಡಿಕೆ ಈಡೇರಿಸುವ ಸಂಬಂಧ ಈಗಾಗಲೇ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿದೆ. ಅದರ ಮುಂದುವರಿದ ಭಾಗವಾಗಿ ಅ. 1 ವಿಶ್ವ ಹಿರಿಯ ನಾಗರಿಕರ ದಿನದಂದು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಶಾಂತಿಯುತವಾಗಿ ಇಡೀ ದಿನ ಧರಣಿ ನಡೆಸಲಿದ್ದೇವೆ ಎಂದರು.
ನಿವೃತ್ತ ಮುಖ್ಯಶಿಕ್ಷಕ ಎಸ್​ .ಡಿ. ಕಡಿವಾಲ ಮಾತನಾಡಿ, 7ನೇ ವೇತನ ಆಯೋಗ 2022ರಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ. 2023ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಅರ ಮಧ್ಯಂತರ ಪರಿಹಾರವನ್ನೂ ನೀಡಿದೆ. ಆದರೆ, 2022 ಜು.1 ರಿಂದ 2024 ಜು. 24ರ ವರೆಗೆ ನಿವೃತ್ತರಾದವರಿದೆ 7ನೆ ವೇತನ ಆಯೋಗದ ಮಾರ್ಗಸೂಚಿಯಂತೆ ಪಿಂಚಿಣಿ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡುತ್ತಿರುವುದು ಸರಿಯಾದ ಕ್ರಮ ಅಲ್ಲ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ, ಆಗಿರುವ ಅನ್ಯಾಯವನ್ನು ಸರಿಪಡಿಸಲು ಹೋರಾಟ ಮಾಡಲಿದ್ದೇವೆ ಎಂದರು.
ಗದಗ ಜಿಲ್ಲೆಯಲ್ಲಿ 600 ನಿವೃತ್ತರು ಸೇರಿದಂತೆ ರಾಜ್ಯಾದ್ಯಂತ 18 ಸಾವಿರ ನಿವೃತ್ತ ನೌಕರರು 7ನೆ ವೇತನ ಆಯೋಗದಂತೆ ಪಿಂಚಣಿ ಹಾಗೂ ಇನ್ನಿತರ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈಗಾಗಲೇ 7ನೇ ವೇತನ ಆಯೋಗದ ಶಿಫಾರಸಿನಂತೆ ಮಧ್ಯಂತರ ಪರಿಹಾರ ಪಡೆದಿರುವ ಕಾರಣ, ನಮಗೂ 7ನೇ ವೇತನ ಆಯೋಗದ ಶಿಫಾರಸು ಅನ್ವಯವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಐ.ಬಿ. ತಳವಾರ, ಎಸ್​.ಎಸ್​ . ಕರಡಿ, ಎಸ್​ .ಎಂ. ಕಟ್ಟಿಮನಿ, ಶಂಕ್ರಪ್ಪ ಉಂಕಿ ಇತರರು ಇದ್ದರು.