ಗದಗ: ಗಣಿತ ಕಲಿಕಾ ಆಂದೋಲನದ ಮೂಲಕ ಗ್ರಾಮ ಮಟ್ಟದ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಸುಧಾರಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ,ಶಾಲಾ ಶಿಕ್ಷಣ ಇಲಾಖೆ,ಅಕ್ಷರ ಪೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತಿ ಮಟ್ಟದ ಗಣಿತ ಸ್ಪರ್ಧೆಗಳ ಜಿಲ್ಲೆಯ ವರದಿಯಲ್ಲಿ ಕಡಿಮೆ ಸ್ಥಾನವನ್ನು ತೆಗೆದುಕೊಂಡ ತಾಲೂಕುಗಳು ಮುಂದಿನ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನದಿಂದ ಅಕ್ಷರ ಫೌಂಡೇಷನ್ ನೀಡಿದ ಗಣಿತ ಉಪಕರಣಗಳ ಕಿಟ್‌ಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಮಕ್ಕಳಿಗೆ ಗಣಿತವನ್ನು ಬೋದಿಸಿ ಮಕ್ಕಳ ಕಲಿಕಾ ಗುಣಮಟ್ಟವನ್ನು ಸುಧಾರಿಸಬೇಕು ಎಂದು ಸೂಚಿಸಿದರು.
ಲಕ್ಕುಂಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆಂಚಪ್ಪ ಎಸ್ ಪೂಜಾರ್ ಅವರು ಮಾತನಾಡಿ ಗಣಿತ ಕಲಿಕಾ ಆಂದೋಲನ ಮತ್ತು ಗಣಿತ ಸ್ಪರ್ಧೆಗಳ ಬಗ್ಗೆ ಮುಂಚಿತವಾಗಿ ಸಮಯ ನಿಗದಿ ಮಾಡಬೇಕು ಅಂದಾಗ ಸ್ವಯಂ ಸೇವಕರ ನಿಯೋಜನೆ ಸೇರಿದಂತೆ ಉಳಿದ ಕಾರ್ಯಗಳನ್ನು ನಿರ್ವಹಿಸಲು ತಯಾರಿ ಮಾಡಿಕೊಳ್ಳುತ್ತೇವೆ ಎಂದರು.
ಈಗಾಗಲೇ ಗ್ರಾಮ ಪಂಚಾಯತಿ ಮಟ್ಟದ ಶಾಲೆಗಳಲ್ಲಿ ಶಿಕ್ಷಕರು ಉತ್ತಮವಾಗಿ ಬೋದಿಸುತ್ತಿದ್ದಾರೆ,ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿಶೇಷ ಗಮನಹರಿಸಿ ಶಾಲೆಗಳಿಗೆ ಬೇಟಿ ನೀಡಬೇಕು ಅಂದಾಗ ಶಾಲೆಗಳಲ್ಲಿ ಶಿಕ್ಷಕರು ಮನೋಬಲದಿಂದ ಬೋದಿಸುತ್ತಾರೆ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆರ್ ಎಸ್ ಬುರಡಿ ಮಾತನಾಡಿ ಶಾಲೆಗಳಿಗೆ ಮೊದಲು ವಿದ್ಯಾರ್ಥಿಗಳು ದಾಖಲಾಗಬೇಕು, ದಾಖಲಾದ ಮಗು ನಿಯಮಿತವಾಗಿ ಶಾಲೆಗೆ ಬರುವಂತೆ ನೋಡಿಕೊಳ್ಳಬೇಕು. ನಂತರ ಮಕ್ಕಳಿಗೆ ಗುಣಮಟ್ಟದ ಕಲಿಕೆಯಾಗಬೇಕು ಎಂದರು.
ಗಣಿತ ಕಲಿಕಾ ಅಂದೋಲನವನ್ನು ಪ್ರತಿ ವರ್ಷ ಆಯೋಜಿಸಿ ಗಣಿತ ಸ್ಪರ್ಧೆ, ಕಾರ್ಯಗಾರ ಕೈಗೊಳ್ಳಲಾಗಿದೆ, ಗ್ರಾಮ ಪಂಚಾಯತ ಮಟ್ಟದ ಶಾಲೆಗಳಲ್ಲಿ ಅಕ್ಷರ ಫೌಂಡೇಶನ್ ನೀಡಿದ ಗಣಿತ ಕಿಟ್‌ಗಳನ್ನು ಬಳಸಿಕೊಂಡು ಮಕ್ಕಳಿಗೆ ಗಣಿತದ ಸಮಗ್ರ ಮಾಹಿತಿಯನ್ನು ಕಲಿಸಬಹುದು ಎಂದರು.
ಇದೇ ಸಂದರ್ಭದಲ್ಲಿ ಉತ್ತಮ ಫಲಿತಾಂಶವನ್ನು ಪಡೆದ 25 ಶಾಲೆಗಳು ಮತ್ತು 25 ಗ್ರಾಮ ಪಂಚಾಯತಿಗಳನ್ನು ಅಭಿನಂದಿಸಿದರು, ಗ್ರಾಮ ಪಂಚಾಯತ ಮಟ್ಟದ ಗಣಿತ ಸ್ಪರ್ಧೆಗಳ ಗದಗ ಜಿಲ್ಲೆಯ ವರದಿಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ (ಅಭಿವೃದ್ಧಿ) ಉಪನಿರ್ದೇಶಕ ಜಿ.ಎಲ್ ಬಾರಾಟಕ್ಕೆ,ಕ್ಷೇತ್ರ ಶಿಕ್ಷಣಾಧಿಕಾರಿ ವಿ ವಿ ನಡುವಿನಮನಿ ,ಅಕ್ಷರ ಫೌಂಡೇಶನ್ ವಿಭಾಗೀಯ ವ್ಯವಸ್ಥಾಪಕರಾದ ಶ್ರೀಮತಿ ಅಂಜಲೀನಾ ಗ್ರೇಗರಿ, ಪಂಚಾಯತ್ ರಾಜ್ ಇಲಾಖೆ ಸಹಾಯಕ ನಿರ್ದೇಶಕ ಅಶ್ವಿನಿ ಕುರಡಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ ಎಂ ಹೀರೆಮಠ,ಎ.ಎನ್ ನಾಗರಳ್ಳಿ, ಮಾರುತಿ ಮಲ್ಲಾಪುರ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಪಿಡಿಓಗಳು ಶಾಲಾ ಶಿಕ್ಷಕರು ಹಾಜರಿದ್ದರು.