ಜಿಲ್ಲೆ

ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಪುರಸ್ಕಾರ

Gadag - Shivanand Hiremath


ವಿದ್ಯಾರ್ಥಿಗಳು ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಲಿ : ಡಾ. ರಾಧಿಕಾ
ಗದಗ : ವಿದ್ಯಾರ್ಥಿಗಳು ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಬೆಳೆಯಬೇಕು ಸ್ವಾವಲಂಬನೆಯ ಬದುಕಿಗೆ ಪರಿಶ್ರಮದ ಓದು, ಮನನ, ಗೃಹಿಕೆ ಅವಶ್ಯ ಎಂದು ವೈದ್ಯೆ ಡಾ. ರಾಧಿಕಾ ಕುಲಕರ್ಣಿ ಹೇಳಿದರು.
ಅವರು ಬುಧವಾರ ಗದಗ ತಾಲೂಕಿನ ನಾಗಾವಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಣ ಪ್ರೇಮಿ, ತ್ಯಾಗಜೀವಿ ಶ್ರೀ ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನವು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ಗದಗ ತಾಲೂಕಿನ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಸರಣಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪಂಚಸೂತ್ರಗಳಾದ ಸಮಯ ಪ್ರಜ್ಞೆ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ, ಕಠಿಣ ಪರಿಶ್ರಮ, ಆತ್ಮವಿಶ್ವಾಸ ಇವುಗಳನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ಬೆಳೆಯುವ ಹಂತದಲ್ಲೇ ಅಳವಡಿಸಿಕೊಂಡರೆ ಬದುಕು ಸುಂದರವಾಗಿ ರೂಪುಗೊಳ್ಳುವದು. ತಂದೆ ತಾಯಿಗಳು ನೀಜವಾದ ದೇವರು ಇವರನ್ನು ನಾವು ಪೂಜಿಸಿ ಗೌರವಿಸಬೇಕು. ವೃದ್ದಾಪ್ಯದಲ್ಲಿ ಅವರಿಗೆ ಆಸರೆಯಾಗಿ ನಿಲ್ಲಬೇಕು ಎಂದರು.
ವಿದ್ಯಾರ್ಥಿಗಳು ನಿಯಮಿತ ವ್ಯಾಯಾಮ, ಪೌಷ್ಠಿಕ ಆಹಾರ ಸೇವನೆ, ಸರಿಯಾದ ನಿದ್ರೆ, ಕ್ರಮಬದ್ಧ ಅಧ್ಯಯನ ಇವು ಜೀವನದ ಕ್ರಮಗಳಾಗಿದ್ದು ಇವುಗಳನ್ನು ಸರಿಯಾಗಿ ಅನುಸರಿಸಬೇಕು ಎಂದರು.
ಇನ್ನೋರ್ವ ಮುಖ್ಯ ಅತಿಥಿ ಡಾ.ಸಾಧಿಕಾ ನೂರಾನಿ ಅವರು ಶಿಕ್ಷಣ ಕ್ಷೇತ್ರ ಈ ಮೊದಲಿಗಿಂತಲೂ ಇಂದು ಸಾಕಷ್ಟು ಸುಧಾರಣೆಯಾಗಿದೆ ಜೊತೆಗೆ ಸೌಲಭ್ಯಗಳೂ ಹೆಚ್ಚಾಗಿವೆ ಇವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಮುನ್ನಡೆ ಸಾಧಿಸಬೇಕೆಂದರು.
ಸಮಾರAಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಎಂ.ಪಿ.ಗೋಲಪ್ಪನವರ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಹಾಗೂ ಉಪಾಧ್ಯಕ್ಷ ಶಂಕ್ರಪ್ಪ ಅಣ್ಣಿಗೇರಿ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಸಮಾರಂಭದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಶಿವಾನಂದ ಕತ್ತಿ, ನೇಹಾ ಹಾಗೂ ಶಶಿಕಲಾ ಉಪಸ್ಥಿತರಿದ್ದರು.
ಕಾವ್ಯಾ ರಂಗನಗೌಡ್ರ, ಗೌತಮ್ ಪೂಜಾರ, ಆಶೀಫ್‌ಅಲಿ ನದಾಫ, ಆಫ್ರೀನ್ ಶಲವಡಿ ವಿದ್ಯಾರ್ಥಿಗಳಿಗೆ ಪ್ರತಿಷ್ಠಾನದ ಪ್ರತಿಭಾ ಪುರಸ್ಕಾರ ವಿತರಿಸಿ ಗೌರವಿಸಲಾಯಿತು. ಶ್ರೀದೇವಿ ಮಡಿವಾಳರ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಎ.ಎ.ಬಂಡಿವಾಡಮಠ ಸ್ವಾಗತಿಸಿದರು, ಜ್ಯೋತಿ ಚಲವಾದಿ ನಿರೂಪಿಸಿದರು ಕೊನೆಗೆ ವ್ಹಿ.ಎಂ.ಖ್ಯಾಡದ ವಂದಿಸಿದರು.