ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆಯ ಹೋಬಳಿಯ ಶ್ರೀ ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ಪ್ರಾಧಿಕಾರ ರಚಿಸಲು ಮುಜರಾಯಿ ಇಲಾಖೆ ಚಿಂತನೆ ನಡೆಸಿದ್ದು, ಶ್ರೀಕ್ಷೇತ್ರಕ್ಕೆ ಮತ್ತಷ್ಟು ಅಭಿವೃದ್ಧಿ ಸ್ಪರ್ಶ ಸಿಗುವ ನಿರೀಕ್ಷೆ ಗರಿಗೆದರಿದೆ.
ಕಳೆದ ಸಾಲಿನಲ್ಲಿ ಮುಜರಾಯಿ ಇಲಾಖೆಗೆ ಅದಾಯ ತರುವ ಪ್ರಮುಖ 10 ಶ್ರೀಮಂತ ದೇಗುಲಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಮೊದಲ ಸ್ಥಾನದಲ್ಲಿದ್ದರೆ ದೊಡ್ಡಬಳ್ಳಾಪುರ ಘಾಟಿ ಸುಬ್ರಹ್ಮಣ್ಯ ದೇಗುಲ ಟಾಪ್ 9ರಲ್ಲಿ ಸ್ಥಾನ ಪಡೆದುಕೊಂಡಿತ್ತು. 2022-23ನೇ ಸಾಲಿನಲ್ಲಿ ಬರೋಬ್ಬರಿ 12.25 ಕೋಟಿ ರೂ.ಆದಾಯ ಕಂಡಿರುವ ಈ ಕ್ಷೇತ್ರದಲ್ಲಿ ಮತ್ತಷ್ಟು ಮಹತ್ತರವಾದ ಅಭಿವೃದ್ಧಿ ಕಾರ್ಯ ನಡೆಸಲು ಮುಜರಾಯಿ ಇಲಾಖೆ ಚಿಂತನೆ ನಡೆಸಿದ್ದು, ಈ ಸಂಬಂಧ ಇದೇ ಡಿ.8ರಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ವಿಶೇಷ ಸಭೆ ನಡೆಯಲಿದೆ ಎನ್ನಲಾಗಿದೆ.
ಘಾಟಿಗೆ ಪ್ರಾಧಿಕಾರ ರಚಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಘಾಟಿಯಲ್ಲಿ ಆಗಬೇಕಾದ ಹಲವು ಅಭಿವೃದ್ಧಿ ಕೆಲಸಗಳಿಗೆ ವೇಗ ದೊರೆಯಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.
ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿರುವ ಘಾಟಿ ಕ್ಷೇತ್ರದಲ್ಲಿ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾದ ಹಣ, ದಾನಿಗಳ ದೇಣಿಗೆ, ವಿವಿಧ ಪೂಜಾಸೇವೆಯಿಂದ ಸಂಗ್ರಹವಾದ ಕಾಣಿಕೆ, ಯಾತ್ರಿನಿವಾಸದ ಬಾಡಿಗೆ ಸೇರಿ ವಿವಿಧ ಮೂಲಗಳಿಂದ ಕೋಟ್ಯಂತರ ರೂ.ಆದಾಯ ಬರುತ್ತಿದೆ ಜತೆಗೆ ಶಕ್ತಿ ಯೋಜನೆ ಬಳಿಕ ಮಹಿಳಾ ಭಕ್ತರ ಸಂಖ್ಯೆ ದ್ವಿಗುಣಗೊಂಡಿದೆ. ವಾರಾಂತ್ಯ ಹಾಗೂ ವಿಶೇಷ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುವುದರಿಂದ ಮೂಲಸೌಕರ್ಯಗಳನ್ನು ಹೆಚ್ಚಿಸುವ ಸಂಬಂಧ ಮುಜರಾಯಿ ಇಲಾಖೆ ಆಸಕ್ತಿ ವಹಿಸಿದೆ.
ಮಲೆಮಹದೇಶ್ವರ ಮಾದರಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಮೇಲೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ದೇಗುಲದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಂಡಿತು. ಭಕ್ತರಿಂದ ಸಾಕಷ್ಟು ಮೆಚ್ಚುಗೆಗೆ ಕಾರಣವಾಯಿತು. ಇದರಿಂದ ಉತ್ಸಾಹಗೊಂಡ ಇಲಾಖೆ ಇದೇ ಮಾದರಿಯಲ್ಲಿ ಮತ್ತಷ್ಟು ದೇಗುಲಗಳ ಅಭಿವೃದ್ಧಿಗೆ ಆಸಕ್ತಿ ತಾಳಿದೆ ಈ ಪಟ್ಟಿಯಲ್ಲಿ ಘಾಟಿ ದೇಗುಲವೂ ಸೇರ್ಪಡೆಯಾಗಲಿದೆ ಎಂಬ ಕಾರಣಕ್ಕೆ ಸುಬ್ರಹ್ಮಣ್ಯ ಭಕ್ತರಲ್ಲಿ ಸಂತಸ ಮೂಡಿಸಿದೆ.
ನಾಗರಾಧನೆಗೆ ಪ್ರಸಿದ್ಧ ನಾಗರಾಧನೆಯ ಪ್ರಮುಖ ದೇಗುಲವಾಗಿ ಗುರುತಿಸಿಕೊಂಡಿರುವ ಶ್ರೀ ಘಾಟಿ ಕ್ಷೇತ್ರದಲ್ಲಿನ ನಾಗರಕಲ್ಲು (ನಾಗರಕಟ್ಟೆ)ಗೆ ಹಾಲೆರೆಯುವ ಸಂಪ್ರದಾಯ ಹೆಚ್ಚು ಪ್ರಚಲಿತದಲ್ಲಿದೆ, ನಾಗರಪಂಚಮಿಯಂದು ಭಕ್ತಸಾಗರವೇ ಹರಿದುಬರುತ್ತದೆ, ದೊಡ್ಡಬಳ್ಳಾಪುರದಿಂದ 14 ಕಿ.ಮೀ, ಬೆಂಗಳೂರಿನಿಂದ 51 ಕಿ.ಮೀ ದೂರದಲ್ಲಿದ್ದು ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರವಾಗಿದೆ. ಇಲ್ಲಿ ಸುಬ್ರಹ್ಮಣ್ಯ ದೇವರನ್ನು ನಾಗ ರೂಪದಲ್ಲಿ ಆರಾಧಿಸಲಾಗುತ್ತದೆ. ಎಸ್.ಎಸ್.ಘಾಟಿ ಎಂದು ಕರೆಯಲ್ಪಡುವ ಕ್ಷೇತ್ರಕ್ಕೆ ಆಡುಭಾಷೆಯಲ್ಲಿ ಸುಬ್ರಾಯನ ಘಾಟಿ ಎಂದೂ ಕರೆಯಲಾಗುತ್ತದೆ. ಘಾಟಿ ಸುಬ್ರಹ್ಮಣ್ಯ ಗ್ರಾಪಂ ಕೇಂದ್ರವಾಗಿದ್ದು, ತೂಬಗೆರೆ ಮಂಡಲ ಪಂಚಾಯಿತಿಯಿಂದ ಬೇರ್ಪಟ್ಟು 1993ರಲ್ಲಿ ಸ್ವಾತಂತ್ರ್ಯಪಂಚಾಯತಿಯಾಗಿ ಮಾರ್ಪಟ್ಟಿತ್ತು.
ಮಲ್ಟಿ ಪಾರ್ಕಿಂಗ್ ಘಾಟಿ ದನಗಳ ಜಾತ್ರೆ, ಬ್ರಹ್ಮರಥೋತ್ಸವ, ನಾಗರಪಂಚಮಿ ಸೇರಿ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಈ ವೇಳೆ ವಾಹನಗಳ ನಿಲುಗಡೆಗೆ ಸಾಕಷ್ಟು ತೊಂದರೆ ಎದುರಾಗುತ್ತದೆ. ಕುಡಿವ ನೀರು, ಶೌಚಗೃಹ ಸೇರಿ ಅಗತ್ಯ ಮೂಲಸೌಕರ್ಯಗಳಿಗೆ ಸಂಕಷ್ಟ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಹಿಂದೆಯೇ ಮಲ್ಟಿ ಪಾರ್ಕಿಂಗ್, ಶಾಫಿಂಗ್ ಮಾಲ್ ನಿರ್ಮಾಣಕ್ಕೆ ಚಿಂತನೆ ನಡೆದಿತ್ತು. ಪ್ರಾಧಿಕಾರದ ಸಭೆಯಲ್ಲಿ ಇಲ್ಲಿನ ಮಾಸ್ಟರ್ ಪ್ಲಾನ್ ಏನೆಂಬುದು ಬಹಿರಂಗವಾಗಲಿದೆ.
ಜಿಲ್ಲೆಯಲ್ಲಿಯೇ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ಮುಂಚೂಣಿಯಲ್ಲಿರುವ ರಾಜ್ಯದ ಶ್ರೀಮಂತ ದೇಗುಲಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಘಾಟಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡುಬರುತ್ತಿದೆ. ಅದೇ ರೀತಿ ಆದಾಯವೂ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಕೈಗೊಳ್ಳಲು ಪ್ರಾಧಿಕಾರ ರಚನೆಗೆ ಪ್ರಸ್ತಾವನೆ ಕಳುಹಿಸಲಾಗಿದೆ.
ನಾಗರಾಜ್, ಘಾಟಿ ದೇಗುಲದ ಇಒ