ಜಿಲ್ಲೆ

ಜಗತ್ತನ್ನು ನಡೆಸುವ ಅದೃಶ್ಯ ಶಕ್ತಿಗೆ ವಿನಮ್ರರಾಗಿರಬೇಕು : ಡಾ. ಪಾವಗಡ ಪ್ರಕಾಶ್ ರಾವ್

Gadag - Shivanand Hiremath
ಗದಗ : ನಮ್ಮ ಜ್ಞಾನಕ್ಕೆ ನಿಲುಕದ, ನಮ್ಮ ತರ್ಕಕ್ಕೆ ಸಿಗದ ಅದೃಶ್ಯ ಶಕ್ತಿಯೊಂದು ನಮ್ಮನ್ನೂ ಸೇರಿದಂತೆ ಈ ಜಗತ್ತನ್ನು ನಡೆಸುತ್ತಿರುತ್ತದೆ ಅದರ ಕುರಿತು ನಾವೆಲ್ಲ ವಿನಮ್ರರಾಗಿರಬೇಕು ಎಂದು ಪ್ರವಚನ ಭಾಸ್ಕರ ಡಾ. ಪಾವಗಡ ಪ್ರಕಾಶ್ ರಾವ್ ನುಡಿದರು.
ಅವರು ಇಲ್ಲಿನ ಕುಮಾರವ್ಯಾಸ ಪ್ರವಚನ ಸಂಚಾಲನ ಸಮಿತಿ ಏರ್ಪಡಿಸಿರುವ ಭಗವದ್ಗೀತಾ ಪ್ರವಚನದ ೧೩ನೇ ದಿನದ ಪ್ರವಚನ ನೀಡಿ ಮಾತನಾಡಿ, ಸಾತ್ವಿಕ ತಪಸ್ಸಿನಿಂದ ದೇವರ ದಿವ್ಯ ಆಶೀರ್ವಾದಕ್ಕೆ ಪಾತ್ರರಾಗಬಹುದೇ ವಿನಃ ನಾವೇ ದೇವರಾಗಲು ಸಾಧ್ಯವಿಲ್ಲ. ಮೈಮೇಲೆ ದೇವರು ಬರುವುದು ಇಂಥ ಎಲ್ಲ ಕುರುಡು ನಂಬಿಕೆಗಳನ್ನು ನಂಬುವ ಮುನ್ನ ಪ್ರಜ್ಞಾವಂತರಾಗಿ ಯೋಚಿಸಬೇಕು. ಭಗವದ್ಗೀತೆಯ ಪ್ರವಚನಗಳು ತಾತ್ವಿಕ ನೆಲೆಗಟ್ಟಿನಲ್ಲಿ ನಡೆಯುವ ಕಾರಣ ಇದು ಕೆಲವರಿಗೆ ಕುತೂಹಲಕಾರಿ ಎನಿಸದೇ ಇರಬಹುದು ಆದಾಗ್ಯೂ ಗದುಗಿನಲ್ಲಿ ಭಗವದ್ಗೀತಾ ಪ್ರವಚನಕ್ಕೆ ಉತ್ತಮ ಸ್ಪಂದನೆ ಸಿಗುತ್ತಿರುವ ಕುರಿತು ಶ್ಲಾಘಿಸಿದರು.
ವೇದಗಳು ಹಾಗೂ ಅವುಗಳಲ್ಲಿನ ಮಂತ್ರಗಳನ್ನು ಲಿಖಿತ ರೂಪದಲ್ಲಿ ಸಂಗ್ರಹಿಸಿರಲಿಲ್ಲ ಆದಾಗ್ಯೂ ಸಾವಿರಾರು ವರ್ಷಗಳಿಂದ ಅವು ಯಥಾವತ್ತಾಗಿ ಜನರ ಸ್ಮೃತಿಯಲ್ಲಿ ಉಳಿದುಕೊಂಡು ಬಂದಿವೆ.
ಸನ್ಯಾಸಿಗಳೇ‌ ಆಗಲಿ ನಾವು ಭಕ್ತರಾಗುವ ಮುನ್ನ ಪರೀಕ್ಷಿಸದೇ ಶರಣಾಗಬಾರದು, ಆಸ್ತಿ-ಪಾಸ್ತಿ ಗಳಿಸಿದವನು ಸ್ವಾಮೀಜಿ ಅಲ್ಲ ಬದಲಿಗೆ ಅವರು ಮಾಡಿದ ತ್ಯಾಗದ ಪರಿಮಾಣ ಅವರನ್ನು ಶ್ರೇಷ್ಠರನ್ನಾಗಿಸುತ್ತದೆ‌ ಎಂದರು.
ಮಹಾಭಾರತದಲ್ಲಿ ಕೃಷ್ಣನನ್ನು ಬಿಟ್ಟರೆ ಭೀಷ್ಮಾಚಾರ್ಯರು ಮಹತ್ವದ ಪಾತ್ರ ವಹಿಸಿದ್ದು, ಅವರ ನಡೆ-ನುಡಿ ಹಾಗೂ ಕಾರ್ಯಗಳು ದಿಟ್ಟವಾಗಿದ್ದವು ಎಂದರು.
ಡಾ.ಕಲ್ಲೇಶ ಮೂರಶಿಳ್ಳಿನ ನಿರೂಪಿಸಿ ವಂದಿಸಿದರು. ಮಾಜಿ ಶಾಸಕರಾದ ಡಿ.ಆರ್ ಪಾಟೀಲ, ಗುರಣ್ಣ ಬಳಗಾನೂರ, ಡಾ.ಎಸ್.ಎಸ್ ಶೆಟ್ಟರ್,
 ಡಾ.ಜಿ.ಬಿ ಪಾಟೀಲ, ಅನಿಲ ವೈದ್ಯ, ವಾದಿರಾಜ ರಾಯ್ಕರ, ಡಾ.ಎಸ್.ಡಿ ಯರಿಗೇರಿ, ಡಾ.ವಿಜಯದತ್ತ ಮಂಗಸೂಳಿ, ಗೋಪಾಲಕೃಷ್ಣ ತಾಸಿನ, ಶಶಿಧರ ಮೂರಶಿಳ್ಳಿನ, ಅನಿಲ ತೆಂಬದಮನಿ, ಗೌರಪ್ಪ ಬೊಮ್ಮಣ್ಣನವರ, ಶ್ರೀಮತಿ ಬಿ.ವಿ ಹಿರೇಮಠ, ಡಾ.ದತ್ತಪ್ರಸನ್ನ ಪಾಟೀಲ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.