ಜಿಲ್ಲೆ

ಜಿಎ, ಹೈಸ್ಕೂಲ್ಗೆ ಸಚಿವ ಅಂಗಡಿ ಭೇಟಿ

ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ತಾವು ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಿದ್ದ ಶಿಕ್ಷಣ ಸಂಸ್ಥೆಗೆ ಬುಧವಾರ ಭೇಟಿ ಕೊಟ್ಟು ಹಳೆಯ ನೆನಪುಗಳಿಗೆ ಜಾರಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ಧತೆ ಪರಿಶೀಲನೆಗಾಗಿ ನಗರದ ವಿವಿಧ ಪ್ರೌಢಶಾಲೆಗಳ ಪರೀಕ್ಷಾ ಕೇಂದ್ರಗಳಿಗೆ ತೆರಳಿದ ಸಚಿವರು, ಗಿಲಗಿಂಚಿ ಅರಟಾಳ ಸಂಯುಕ್ತ ಪದವಿಪೂರ್ವ ಕಾಲೇಜಿಗೂ ಭೇಟಿ ನೀಡಿದರು. ಸಚಿವರಾದ ನಂತರ ಮೊದಲ ಸಲ ಇಲ್ಲಿಗೆ ಆಗಮಿಸಿದ ಅವರು, ತಾವು ಅಭ್ಯಸಿಸಿದ ತರಗತಿ ಕೊಠಡಿ, ಕುಳಿತ ಬೆಂಚ್, ಓಡಾಡಿದ ಆವರಣ ಕಂಡು ಸಂತಸಗೊಂಡರು. ಶಿಕ್ಷಕರು ಮತ್ತು ಸಿಬ್ಬಂದಿ ಕುಶಲೋಪರಿ ವಿಚಾರಿಸಿದರು.

ನಾನೂ ಇಲ್ಲಿಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದೆ. ಈಗ ಇದೇ ಪರೀಕ್ಷೆ ಸಿದ್ಧತೆ ಪರಿಶೀಲಿಸಲು ಬಂದಿರುವುದು ಖುಷಿ ತಂದಿದೆ. ನನ್ನ ಶಾಲೆ ನನ್ನ ಹೆಮ್ಮೆ ಎಂದು ಅಭಿಮಾನದಿಂದ ನುಡಿದರು. ಆಗಿನ ಪಠ್ಯಕ್ರಮ, ಬಾಲ್ಯದ ಆಟಗಳು, ಸ್ನೇಹಿತರ ಒಡನಾಟ, ಪರೀಕ್ಷೆಗೆ ನಡೆಸಿದ್ದ ತಯಾರಿ, ಪರೀಕ್ಷೆ ನಂತರದ ಜೀವನದ ಕುರಿತು ಸ್ನೇಹಿತರು ಹಂಚಿಕೊಂಡ ಕನಸುಗಳು ಮತ್ತಿತರ ಸಂಗತಿ ಮೆಲಕು ಹಾಕಿದರು. ತಾವು ಪರೀಕ್ಷೆ ಬರೆದಿದ್ದ ಕೊಠಡಿಯಲ್ಲೂ ಕೆಲಕಾಲ ಕಳೆದು ಸಂಭ್ರಮಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಕ್ಷಣಕ್ಕೆ ಸಾಕ್ಷಿಯಾದರು.

ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ: ಪ್ರತಿ ವಿದ್ಯಾರ್ಥಿ ಶೈಕ್ಷಣಿಕ ಬದುಕಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿಕ್ಸೂಚಿ ಇದ್ದಂತೆ. ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದೇ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.

ನಗರದ ಸರ್ದಾರ ಸರ್ಕಾರಿ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ಪ್ರಕಟಿಸಿದ ಮಾರ್ಗಸೂಚಿನ್ನು ವಿದ್ಯಾರ್ಥಿಗಳು ಪಾಲಿಸಬೇಕು. ಪರೀಕ್ಷೆ ಆರಂಭಕ್ಕೂ ಒಂದೂವರೆ ತಾಸು ಮೊದಲೇ ಕೇಂದ್ರದಲ್ಲಿರಬೇಕು. ವಿದ್ಯಾರ್ಥಿಗಳ ಪಾಲಕರು ಪರೀಕ್ಷಾ ಕೇಂದ್ರದ ಹೊರಗೆ ಜನದಟ್ಟಣೆಯಾಗದಂತೆ ಎಚ್ಚರ ವಹಿಸಬೇಕು ಎಂದರು.

ಕಂಟೇನ್ಮೆಂಟ್ ಜೋನ್‌ನಿಂದ ಬರುವ 30 ವಿದ್ಯಾರ್ಥಿಗಳಿಗೆ ಬೆಳಗಾವಿ ತಾಲೂಕಿನ ಉಚಗಾವಿ ಪರೀಕ್ಷಾ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಅವರಿಗೆ ಎನ್-95 ಮಾಸ್ಕ್ ವಿತರಿಸಲಾಗಿದೆ ಎಂದು ಸಲಹೆ ನೀಡಿದರು.