ಹುಬ್ಬಳ್ಳಿ: ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ 20 ಶೃಂಗ ಸಭೆಯು ದೇಶದ 75 ವರ್ಷದ ಇತಿಹಾಸದಲ್ಲಿ ದೊಡ್ಡ ಮೈಲುಗಲ್ಲು. ಮುಖ್ಯವಾಗಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಒಮ್ಮತದಿಂದ ‘ದೆಹಲಿ ಘೊಷಣೆ’ ಮಾಡಿದ್ದು ಬಹು ದೊಡ್ಡ ಸಾಧನೆ. ಭಾರತದ ನೇತೃತ್ವವನ್ನು ಜಗತ್ತು ಒಪ್ಪುತ್ತಿರುವುದರ ಸ್ಪಷ್ಟ ಸಂಕೇತ ಇದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯ ಪ್ರಾಚ್ಯ ಕಾರಿಡಾರ್ಗೆ ಎಲ್ಲರೂ ಸಹಮತದಿಂದ ಒಪ್ಪಿಗೆ ಸೂಚಿಸಿದ್ದು ಆರ್ಥಿಕ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ ಎಂದರು.
ಜಿ 20 ಯಶಸ್ಸನ್ನು ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಅಚ್ಚುಕಟ್ಟಾಗಿ ನಡೆದಿದ್ದು ಕಾಂಗ್ರೆಸ್ಗೆ ಮುಖಭಂಗವಾಗಿದೆ. ಕಾಂಗ್ರೆಸ್ನ ರಾಹುಲ ಗಾಂಧಿ ಹಾಗೂ ಜೈರಾಮ ರಮೇಶ ಅವರಿಗೆ ದಾರಿದ್ರ್ಯೆ ಬಂದಿದೆ. ಪ್ರಧಾನಿ ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ಇವರು ದೇಶವನ್ನೇ ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು.
ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿರುವ ಶಕ್ತಿ ಯೋಜನೆಯಿಂದಾಗಿ ಖಾಸಗಿ ಬಸ್, ವಾಹನ ಚಾಲಕರಿಗೆ ತೊಂದರೆ ಆಗಿದೆ. ಅವರು ಬಡವರು ಇರುವುದರಿಂದ ರಾಜ್ಯ ಸರ್ಕಾರ ಗಮನ ಕೊಡಬೇಕು. ಉಚಿತ ಯೋಜನೆ ಕೊಟ್ಟಿದ್ದೇವೆ ಎಂದು ಸರ್ಕಾರ ಮನಬಂದಂತೆ ನಡೆದುಕೊಳ್ಳುವುದು ಸರಿಯಲ್ಲ ಎಂದರು.
ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಬಗ್ಗೆ ನಮ್ಮ ಪಕ್ಷದ ವರಿಷ್ಠರು ಹೇಳುವವರೆಗೂ ನಾನು ಏನೂ ಹೇಳುವುದಿಲ್ಲ ಎಂದು ಹೇಳಿದರು.