ಮುಂಡಗೋಡ: ಕೊಳಚೆ ನಿಮೂಲನಾ ಮಂಡಳಿ ವತಿಯಿಂದ ಮೊದಲ ಹಂತದಲ್ಲಿ 250 ಅರ್ಹ ಫಲಾನುಭವಿಗಳಿಗೆ ಜಿ ಪ್ಲಸ್ 2 ಮಾದರಿಯ ಮನೆಗಳನ್ನು 2024ರ ಮಾರ್ಚ್ನಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಅವರ ಹೆಸರಿಗೆ ನೋಂದಣಿ ಮಾಡಿಸಿ ಕೊಡಲಾಗುವುದು ಎಂದು ಕೊಳಚೆ ನಿಮೂಲನಾ ಮಂಡಳಿ ಸಹಾಯಕ ಇಂಜಿನಿಯರ್ ಶಂಭುಲಿಂಗ ಹೇಳಿದರು.
ಪಟ್ಟಣ ಪಂಚಾಯಿತಿ ಸಭಾಭವವನದಲ್ಲಿ ಜಿ ಪ್ಲಸ್ 2 ವಿಷಯಕ್ಕೆ ಸಂಬಂಧಿಸಿದಂತೆ ಮಂಗಳವಾರ ಆಯೋಜಿಸಿದ್ದ ಕೊಳಚೆ ನಿಮೂಲನಾ ಮಂಡಳಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮತ್ತು ಸದಸ್ಯರ ಸಭೆಯಲ್ಲಿ ಅವರು ಭರವಸೆ ನೀಡಿದರು. ಕೊಳಚೆ ನಿಮೂಲನಾ ಮಂಡಳಿಯಿಂದ ಪಟ್ಟಣದ ಹೆಬ್ಬಾರನಗರದಲ್ಲಿ ಜಿ ಪ್ಲಸ್ 2 ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಈ ಹಿಂದೆ 908 ಮನೆಗಳಿಗೆ ಅರ್ಜಿಗಳನ್ನು ಕರೆಯಲಾಗಿತ್ತು. ಇದರಲ್ಲಿ 250 ಜನರು ಅರ್ಜಿ ಸಲ್ಲಿಸಿ ಡಿ.ಡಿ. ಹಣ ತುಂಬಿದ್ದಾರೆ. ಈ ಫಲಾನುಭವಿಗಳಿಗೆ ಮಾರ್ಚ್ನಲ್ಲಿ ಮನೆಯನ್ನು ಹಸ್ತಾಂತರಿಸಲಾಗುವುದು. ಉಳಿದ ಮನೆಗಳಿಗೆ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸುವಂತೆ ಪತ್ರಿಕೆ ಹಾಗೂ ನಮ್ಮ ಸಿಬ್ಬಂದಿಯಿಂದ ಜನರಿಗೆ ತಿಳಿ ಹೇಳಲಾಗುತ್ತಿದೆ. ಆದರೆ, ಜನರು ಆಸಕ್ತಿ ತೋರುತ್ತಿಲ್ಲ. ಪಪಂ ಸದಸ್ಯರು ತಮ್ಮ ವಾರ್ಡ್ಗಳಲ್ಲಿ ಮನೆ ಇಲ್ಲದವರಿಗೆ ತಿಳಿ ಹೇಳಿ ಅರ್ಜಿ ಹಾಕಿಸುವ ಕೆಲಸ ಮಾಡಬೇಕು. 2024ರ ಡಿಸೆಂಬರ್ ತಿಂಗಳಿನಲ್ಲಿ ಈ ಯೋಜನೆ ಪೂರ್ಣಗೊಳಿಸಬೇಕು. ಇದು ಸರ್ಕಾರದ ಆದೇಶವಾಗಿದೆ ಎಂದರು.
ಒಂದು ಮನೆಯ ವೆಚ್ಚ 7.70 ಲಕ ್ಷೂ.ಗಳಿದ್ದು, ಎಸ್ಸಿ-ಎಸ್ಟಿ ಫಲಾನುಭವಿಗಳು ಶೇ. 10 ಇತರ ಶೇ.15 ಡಿಡಿ ಹಣ ತುಂಬಬೇಕು. ನಂತರ ಅವರಿಗೆ ಬ್ಯಾಂಕ್ ಸಾಲ ಬೇಡವೆಂದರೆ ಉಳಿದ ಮೊತ್ತವನ್ನು ಮನೆ ಹಸ್ತಾಂತರ ವೇಳೆ ನೀಡಬೇಕಾಗುತ್ತದೆ. ಬ್ಯಾಂಕಿನ ಸಾಲ ಬೇಕಾದರೆ ನಾವು ಕೇಳಿದ ದಾಖಲೆ ನೀಡಬೇಕು ಎಂದರು.
ಈ ಹಿಂದೆ ನೀವು ಪಪಂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಆದರೂ ಜನರಿಗೆ ತಿಳಿ ಹೇಳಿ ಅರ್ಜಿಗಳನ್ನು ಹಾಕಿಸಲಾಗಿತ್ತು ಎಂದು ಸದಸ್ಯ ಫಣಿರಾಜ ಹದಳಗಿ, ಸ್ಲಂ ಬೋರ್ಡ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣ ಪಂಚಾಯಿತಿ ವಿವಿಧ ಸದಸ್ಯರು ಹಾಗೂ ಸ್ಲಂ ಬೋರ್ಡ್ನ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ನಕಾಶೆ ಇಲ್ಲದೆ ಮತ್ತು ನಮಗೆ ತಿಳಿಯದೆ ಹಾಗೆ ಸರ್ವೆ ಮಾಡಿ ಹಕ್ಕುಪತ್ರ ನೀಡಿದ್ದಿರಿ ಹಾಗೆ ಹಕ್ಕುಪತ್ರ ನೀಡಲು ಹೇಗೆ ಬರುತ್ತದೆ ಎಂದು ಕೆಲ ಸದಸ್ಯರು ಪ್ರಶ್ನಿಸಿದರು.
ನಂತರ ಈ ಬಗ್ಗೆ ಸುದೀರ್ಘ ಚರ್ಚೆ ನಡೆದು ಅಂತಿಮವಾಗಿ ಸ್ಲಂ ಬೋರ್ಡ್ನವರು ಈ ಹಿಂದೆ ನೀವೆ ನೀಡಿದ ನಕಾಶೆ ಮತ್ತೆ ಒಂದು ನಕಲು ನಿಮಗೆ ನೀಡುತ್ತೇವೆ. ಒಟ್ಟಿನಲ್ಲಿ ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.
ಪಪಂ ಮುಖ್ಯಾಧಿಕಾರಿ ಚಂದ್ರಶೇಖರ ಬಿ., ಸ್ಲಂ ಬೋರ್ಡ್ ಇಂಜಿನಿಯರ್ ಪ್ರತೀಕ ದಳವಾಯಿ, ಪಪಂ ಇಂಜಿನಿಯರ್ ಶಂಕರ ದಂಡಿನ ಮತ್ತು ಪಪಟ್ಟಣ ಪಂಚಾಯಿತಿ ಸದಸ್ಯರಿದ್ದರು.