ಜಿಲ್ಲೆ

ಐದು ಬಾರಿ ಗೆದ್ದು ದೆಹಲಿಗೆ ಹೋಗಿ ಮನೆಯಲ್ಲಿ ಮಲಗಿದ್ದರು ! ಪರಂ ಹೀಗೆಂದು ಗುಡುಗಿದ್ದು ಯಾರ ವಿರುದ್ಧ ?

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಐದು ಬಾರಿ ಗೆದ್ದು ದೆಹಲಿಗೆ ಹೋಗಿ ಮನೆಯಲ್ಲಿ ಮಲಗಿದ್ದು ಬಿಟ್ಟರೆ ಜಿಲ್ಲೆಯ ಸಮಸ್ಯೆ ಕುರಿತು ಒಮ್ಮೆಯೂ ಬಾಯಿ ಬಿಡಲಿಲ್ಲ, ಹೀಗೆಂದು ಸಂಸದ ಜಿ.ಎಸ್.ಬಸವರಾಜುರನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ತರಾಟೆಗೆ ತೆಗೆದುಕೊಂಡರು.

ತಿಪಟೂರಿನ ಕೆ.ಬಿ.ಕ್ರಾಸ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಪರ ಭಾನುವಾರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಅವರು, 25 ವರ್ಷ ಸಂಸದರಾಗಿದ್ದರೂ ಎಂದೂ ಬಾಯಿಬಿಡಲಿಲ್ಲ, ಮುದ್ದಹನುಮೇಗೌಡ ಸಂಸತ್‌ನಲ್ಲಿ ಗುಡುಗಿದ್ದಾರೆ. ಇಸ್ರೋ, ಎಚ್‌ಎಎಲ್ ಜಿಲ್ಲೆಗೆ ತಂದಿದ್ದು ಅವರನ್ನು ಜಿಲ್ಲೆಯ ಜನರು ಆಶಿರ್ವಾದ ಮಾಡಬೇಕು ಎಂದರು.

ಬಿಜೆಪಿ ಅಭ್ಯರ್ಥಿಗೂ ನಮ್ಮ ಜಿಲ್ಲೆಗೂ ಏನು ಸಂಬಂಧ. ಸಿದ್ದರಾಮಯ್ಯ ಅವರ ವಿರುದ್ಧ ನಿಂತು ಸೋತು ಮಣ್ಣು ಮುಕ್ಕಿದ್ದಾರೆ, ಇಲ್ಲಿಂದ ಸೋತು ಬೇರೆ ಜಿಲ್ಲೆಗೆ ಹೋಗಬೇಕು. ಧರ್ಮ, ದೇವರ ಹೆಸರಿನಲ್ಲಿ ಲೋಕಸಭೆ ಚುನಾವಣೆಯನ್ನು ನಡೆಸಲು ಬಿಜೆಪಿ ಮುಂದಾಗಿದೆ. ಕಳೆದ ಚುನಾವಣೆಯಲ್ಲಿ ಕೊಟ್ಟ ಯಾವ ಭರವಸೆಗಳನ್ನೂ ಈಡೇರಿಸಿಲ್ಲ, ಕಳೆದ ಹತ್ತು ವರ್ಷದಲ್ಲಿ ಸುಳ್ಳಿನಿಂದಲೇ ಆಡಳಿತ ನಡೆಸಲಾಗುತ್ತಿದೆ. ಸುಳ್ಳನ್ನು ಮಾರಾಟ ಮಾಡಿ ಅಧಿಕಾರಕ್ಕೇರುವ ಕನಸು ಕಾಣುತ್ತಿದ್ದಾರೆ ಎಂದು ಹರಿಹಾಯ್ದರು.