ಮಡಿಕೇರಿ: ಕ್ಷೇತ್ರಗಳ ಪುನರ್ ವಿಂಗಡಣೆ ಸಂದರ್ಭ ಕೊಡಗು ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ೨೯ ರಿಂದ ೨೫ಕ್ಕೆ ಇಳಿಕೆ ಮಾಡಿರುವ ಕ್ರಮವನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪಂಚಾಯತ್ ರಾಜ್ ನಿರ್ದೇಶಕರು ಮತ್ತು ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿಗಳು ಹಾಗೂ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಸದಸ್ಯ ಕಾರ್ಯದರ್ಶಿಗಳಿಗೆ ಆಕ್ಷೇಪ ಸಲ್ಲಿಸಿದೆ.
ಈ ಹಿಂದೆ ಇದ್ದ ೨೯ ಕ್ಷೇತ್ರಗಳಿಗೆ ೫ ನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಿ ೩೪ ಜಿ.ಪಂ ಕ್ಷೇತ್ರಗಳನ್ನು ರಚಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಕೊಡಗು ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿದ್ದು, ಜನಸಂಖ್ಯೆಯೂ ಕೂಡ ಚದುರಿರುತ್ತದೆ. ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರವನ್ನು ವಿಂಗಡಿಸುವ ಸಂದರ್ಭ ಮತದಾರರು ಬಹಳಷ್ಟು ದೂರ ಕ್ರಮಿಸುವುದು ಅವೈಜ್ಞಾನಿಕ ರೀತಿಯ ಪ್ರಕ್ರಿಯೆಯಾಗಿರುತ್ತದೆ ಎಂದು ತಿಳಿಸಲಾಗಿದೆ.
ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮವನ್ನು ಈಗಾಗಲೇ ಕುಶಾಲನಗರದ ನೂತನ ಪುರಸಭಾ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ೧೪ನೇ ನಂಬರಿನ ಕೂಡುಮಂಗಳೂರು ಕ್ಷೇತ್ರಕ್ಕೆ ಮುಳ್ಳುಸೋಗೆ ಪಂಚಾಯತ್‌ನ್ನು ಸೇರಿಸಿರುವುದು ಸರಿಯಲ್ಲ. ವಾಲ್ನೂರು, ತ್ಯಾಗತ್ತೂರು ಕ್ಷೇತ್ರ ಸಂಖ್ಯೆ ೧೨ಕ್ಕೆ ಸೇರ್ಪಡೆಗೊಂಡಿರುವ ಗ್ರಾಮಗಳನ್ನು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೂ ಒಳಪಡಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಮಕ್ಕಂದೂರು ಜಿ.ಪಂ ಕ್ಷೇತ್ರ ಸಂ.೧ ಮಡಿಕೇರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಆದರೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಮೇಕೇರಿ ಗ್ರಾ.ಪಂ ಅನ್ನು ಮಕ್ಕಂದೂರು ಕ್ಷೇತ್ರಕ್ಕೆ ಸೇರ್ಪಡೆಗೊಳಿಸಿರುವುದು, ಸಂ.೨ ಕಾಂತೂರು ಮೂರ್ನಾಡು ಕ್ಷೇತ್ರಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಹಾಕತ್ತೂರು ಗ್ರಾ.ಪಂ ಕ್ಷೇತ್ರವನ್ನು ಸೇರ್ಪಡೆಗೊಳಿಸಿರುವುದು ಸರಿಯಲ್ಲ. ಜತೆಗೆ ಬಿಳುಗುಂದ ಕ್ಷೇತ್ರದ ಸಂ.೯ರ ಕಾರ್ಯವ್ಯಾಪ್ತಿ ಕೂಡ ಆಕ್ಷೇಪಣೆಗೆ ಒಳಪಟ್ಟಿರುತ್ತದೆ. ಈ ಕ್ಷೇತ್ರದ ಬೇಳೂರು ಬಸವನಹಳ್ಳಿ ಗ್ರಾಮವೂ ತಾಲ್ಲೂಕು ಪಂಚಾಯತ್ ವ್ಯಾಪ್ತಿಗೂ ಒಳಪಟ್ಟಿರುತ್ತದೆ. ಹೀಗೆ ಪರಿಷ್ಕರಣೆಗೆ ಒಳಪಟ್ಟ ಕೊಡಗು ಜಿ.ಪಂ ನ ಸದಸ್ಯರ ಸಂಖ್ಯೆ ಮತ್ತು ಒಟ್ಟು ವ್ಯಾಪ್ತಿ ಅವೈಜ್ಞಾನಿಕ ರೂಪದಲ್ಲಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ಪ್ರಕರಣ ೧೬೦, ೧೬೧ ಮತ್ತು ೧೬೩ರ ಅನ್ವಯ ಹಾಗೂ ೩೦೮ (ಇ) (ಎಫ್)ರ ಪ್ರಕರಣದಡಿ ಪ್ರದತ್ತವಾದ ಅಧಿಕಾರದ ಚಲಾವಣೆಯ ಸಂದರ್ಭ ಕೊಡಗು ಜಿ.ಪಂ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಜಿಲ್ಲೆಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಈ ಹಿಂದೆ ಇದ್ದಂತಹ ೨೯ ಕ್ಷೇತ್ರಗಳಿಗೆ ಹೆಚ್ಚುವರಿಯಾಗಿ ೫ ಕ್ಷೇತ್ರಗಳನ್ನು ಸೇರಿಸಿ, ಒಟ್ಟು ೩೪ ಜಿ.ಪಂ ಕ್ಷೇತ್ರ ಎಂದು ಪರಿಗಣಿಸಿ ವೈಜ್ಞಾನಿಕ ರೂಪದಲ್ಲಿ ಕ್ಷೇತ್ರವಾರು ವಿಂಗಡಣೆ ಮಾಡಬೇಕೆಂದು ಆಕ್ಷೇಪಣಾ ಪತ್ರದಲ್ಲಿ ಕಾಂಗ್ರೆಸ್ ಮನವಿ ಮಾಡಿದೆ.