ಜಿಲ್ಲೆ

ಸಮಾಜಕ್ಕೆ ಪಾಠ ಮಾಡಿದ ಜಿ.ಎಲ್. ಹೆಗಡೆ ವ್ಯಕ್ತಿತ್ವ

ಕುಮಟಾ: ಡಾ.ಜಿ.ಎಲ್. ಹೆಗಡೆ ಅವರು ಸಮಷ್ಟಿಯಾಗಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಒಬ್ಬ ಪ್ರಾಧ್ಯಾಪಕರು ನಿವೃತ್ತಿ ಆದ ಐದು ವರ್ಷಗಳ ಬಳಿಕವೂ ಇಂಥ ಅಭಿನಂದನಾ ಸಮಾರಂಭ ನಡೆಯುವುದೇ ಅವರ ಸಾಧನೆಗೆ ಸಾಕ್ಷಿ. ಅದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎಂದು ಬೆಂಗಳೂರು ಉತ್ತರ ವಿವಿಯ ಕುಲಪತಿ ಡಾ. ನಿರಂಜನ ವಾನಳ್ಳಿ ಹೇಳಿದರು.

ತಾಲೂಕಿನ ತಲಗೋಡದ ಜನಾರ್ಧನ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಜಿ.ಎಲ್. ಹೆಗಡೆ ಅವರಂಥ ಮೇಷ್ಟ್ರು ಇಂದಿನ ಅಗತ್ಯ. ಕಲಿಸುವ ವಿಷಯದ ಜೊತೆ ಬಹುಮುಖಿ ಗೀಳನ್ನು ಹೆಚ್ಚಿಸಿದ ಜಿ.ಎಲ್. ಹೆಗಡೆ ಅವರ ವ್ಯಕ್ತಿತ್ವವೇ ಸಮಾಜಕ್ಕೆ ಪಾಠ ಮಾಡಿದೆ ಎಂದರು.

ಸಂಗೀತ ವಿದ್ವಾಂಸ, ಗಾಯಕ ಡಾ. ವಿದ್ಯಾಭೂಷಣ ಮಾತನಾಡಿ, ನಾವು ಪ್ರತಿ ದಿನ ನಮ್ಮ ಮನಸನ್ನು ಶೋಧಿಸಿಕೊಳ್ಳಬೇಕು. ಅನುದಿನ ಮಾಡುವ ಪಾಪ, ಪುಣ್ಯದ ವೆಚ್ಚ ನೋಡಿಕೊಳ್ಳಬೇಕು ಎಂದು ಪುರಂದರ ದಾಸರೂ ಹೇಳಿದ್ದಾರೆ. ಆ ದಿನದ ಲೆಕ್ಕಾಚಾರ ಅದೇ ದಿನ ಪೂರ್ಣ ಲೆಕ್ಕ ಮಾಡಬೇಕು. ಮರುದಿನ ಒಳ್ಳೆಯದನ್ನು ಹೆಚ್ಚು ಮಾಡಬೇಕು. ಪಾಪ ಕಡಿಮೆ ಮಾಡಿಕೊಳ್ಳಬೇಕು. ಧರ್ಮ, ಅಧರ್ಮ ಕುರಿತು ಅರಿತು ನೋಡಿಕೊಳ್ಳಬೇಕು. ಅಧರ್ಮದ ಬೇರು ಕತ್ತರಿಸಿಕೊಳ್ಳಬೇಕು ಎಂದರು.

ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ, ಲೌಕಿಕ ಬೆಳಗಿಸುವ ಕಾರ್ಯ ಆಗಬೇಕು. ಭಗವತ್ ದಾಸ್ಯದ ಗುಣ ಮನಸಿನಲ್ಲಿ ಇರಬೇಕು. ಇನ್ನೊಬ್ಬರು ನಮ್ಮ ಬಗ್ಗೆ ಹೇಳಬೇಕು ಎಂದರು.

ಡಾ.ಎಂ. ಪ್ರಭಾಕರ ಜೋಶಿ ಗುರು ಗೌರವ ವರ್ಣ ವೈಭವ ಬಹು ಭಾಷಾ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿದರು.

ಗುರು ಗೌರವ ಸ್ವೀಕರಿಸಿದ ಡಾ. ಜಿ.ಎಲ್. ಹೆಗಡೆ ಮಾತನಾಡಿ, ಬಡತನ-ಸಿರಿತನ ಶಾಶ್ವತವಲ್ಲ, ಆದರೆ, ಪ್ರೀತಿ ಹಾಗಲ್ಲ. ಬಡತನದಲ್ಲಿಯೂ ಅಷ್ಟು ಪ್ರೀತಿ ಕಂಡಿದ್ದೇವೆ. ಗುರು ಪರಂಪರೆಗೆ, ಪ್ರೀತಿ-ವಾತ್ಸಲ್ಯ ನೀಡಿದ ತಾಯಿಯ ಪ್ರೀತಿಗೆ ಏನು ಕೊಡಲು ಸಾಧ್ಯವಿದೆ. ಧನ್ಯತಾಭಾವ ಬಿಟ್ಟು ಬೇರೇನೂ ಇಲ್ಲ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿದರು. ಮುರಳೀಧರ ಪ್ರಭು, ಮಾಯಾ ಜಿ. ಹೆಗಡೆ, ಇತರರಿದ್ದರು. ಗೋಪಾಲಕೃಷ್ಣ ಹೆಗಡೆ ಹುಕ್ಲಮಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಹೆಗಡೆ ಭದ್ರನ್ ಅಭಿನಂದನಾ ಗ್ರಂಥದ ಕುರಿತು ವಿವರಿಸಿದರು. ಮಂಜುನಾಥ ಭಟ್ ಸುವರ್ಣಗದ್ದೆ, ಡಾ. ಸುರೇಶ ಜಿ. ಹೆಗಡೆ ಹಾಗೂ ಗಣೇಶ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.

ಡಾ.ಕೆ.ಪಿ. ಹೆಗಡೆ, ಡಾ.ಕೆ.ಪಿ. ಭಟ್ಟ ಹಾಗೂ ಡಾ. ಶ್ರೀಪಾದ ಹೆಗಡೆ ಅವರಿಂದ ಹಾಲಕ್ಕಿ ಸಮಾಜದ ಒಂದು ಅಧ್ಯಯನ, ಡಾ. ಎಚ್.ಎನ್. ಮುರಳೀಧರ, ಕೆ.ಪಿ. ಪ್ರಕಾಶ ಅವರಿಂದ ಶೇಣಿ ರಾಮಾಯಣ ಕೃತಿ ಲೋಕಾರ್ಪಣೆಗೊಂಡಿತು. ಜೊತೆಗೆ ಡಾ.ಕೆ.ಪಿ.ಭಟ್ಟ, ಡಾ. ಗೋಪಾಲಕೃಷ್ಣ ಶರ್ವ, ಸುಬ್ರಹ್ಮಣ್ಯ ಭಟ್ಟ, ಮಂಜುನಾಥ ಭಟ್ಟ ಕೊಡ್ಲೆಕೆರೆ, ಜಿ.ಜಿ. ಭಟ್ಟ ಉಂಚಗಿ, ವಿನಾಯಕ ಎಸ್. ಹೆಗಡೆ ಅವರನ್ನು ಜಿ.ಎಲ್. ಹೆಗಡೆ ಗೌರವಿಸಿದರು.