ಜಿಲ್ಲೆ

ಕಸಬಾ ಕೃಷಿ ಪತ್ತಿನ ಸಂಘಕ್ಕೆ ಜಿ.ಕೆ.ಮಧು ಅಧ್ಯಕ್ಷ

 ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ತಾಲೂಕು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಗೊಲ್ಲರಹೊಸಹಳ್ಳಿ ಕ್ಷೇತ್ರದ ನಿರ್ದೇಶಕ ಜಿ.ಕೆ.ಮಧು ಅವಿರೋಧವಾಗಿ ಆಯ್ಕೆಯಾದರು.

ಡಿ.ಕಾಳೇನಹಳ್ಳಿ ಕ್ಷೇತ್ರದ ಡಿ.ಸಿ.ರಂಗಸ್ವಾಮಿ ರಾಜೀನಾಮೆ ಸಲ್ಲಿಸಿದ್ದ ಕಾರಣ, ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಹಕಾರ ಇಲಾಖೆ ಶನಿವಾರ ಚುನಾವಣೆ ಪ್ರಕ್ರಿಯೆ ನಡೆಸಿತು. ಅಧ್ಯಕ್ಷ ಸ್ಥಾನಕ್ಕೆ ಗೊಲ್ಲರಹೊಸಹಳ್ಳಿ ಕೇತ್ರದಿಂದ ನಿರ್ದೇಶಕನಾಗಿ ಆಯ್ಕೆಯಾಗಿದ್ದ ಜಿ.ಕೆ.ಮಧು ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ, ಸಹಕಾರ ಇಲಾಖೆ ಅಧಿಕಾರಿ ಹೇಮಚಂದ್ರ ಜಿ.ಕೆ.ಮಧು ಅವರ ಅವಿರೋಧ ಆಯ್ಕೆ ಘೋಷಿಸಿದರು.

ನೂತನ ಅಧ್ಯಕ್ಷರನ್ನು ಶಾಸಕ ಸಿ.ಎನ್.ಬಾಲಕೃಷ್ಣ, ರಾಜ್ಯ ಮರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ, ಸಹಕಾರ ಸಂಘದ ಉಪಾಧ್ಯಕ್ಷ ಸುರೇಶ್ ಬಾಳೆಮಂಡಿ, ಮಾಜಿ ಅಧ್ಯಕ್ಷ ಡಿ.ಸಿ.ರಂಗಸ್ವಾಮಿ ಸೇರಿದಂತೆ ನಿರ್ದೇಶಕರು, ಅವರ ಬೆಂಬಲಿಗರು ಅಭಿನಂದಿಸಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಕಸಬಾ ಸೊಸೈಟಿ ಆರ್ಥಿಕವಾಗಿ ಸದೃಢವಾಗಿ ಬೆಳೆದಿದೆ. ಅತ್ಯುತ್ತಮ ಕಟ್ಟಡವನ್ನು ಹೊಂದಿದ್ದು, ಬಾಡಿಗೆ ರೂಪದಲ್ಲಿ ಸಂಪನ್ಮೂಲ ಕ್ರೋಡೀಕರಿಸಲಾಗುತ್ತಿದೆ. ಸೊಸೈಟಿಯಡಿ ಡಿ.ಕಾಳೇನಹಳ್ಳಿ, ಯಾಚೇನಹಳ್ಳಿ, ಮಳ್ಳೇನಹಳ್ಳಿ, ನಾಗಮುದ್ರ, ಮಾರೇನಹಳ್ಳಿ ಗ್ರಾಮಗಳಲ್ಲಿ ಪಡಿತರ ವಿತರಣೆ ವ್ಯವಸ್ಥೆ ಮಾಡಲಾಗಿದೆ. ಎಲ್ಲ ನಿದೇಶಕರ ಸಹಕಾರದಿಂದ ಅಧ್ಯಕ್ಷರಾಗಿರುವ ಮಧು ತಮ್ಮ ಅವಧಿಯಲ್ಲಿ ಉತ್ತಮ ಕೆಲಸ ಮಾಡಬೇಕು. ಆದೇ ರೀತಿ ಖಾಲಿ ಇದ್ದ ಒಂದು ನಿರ್ದೇಶಕ ಸ್ಥಾನಕ್ಕೆ ಗೊಲ್ಲರಹೊಸಹಳ್ಳಿ ಗ್ರಾಮದ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ. ಅವರಿಗೂ ಶುಭಾಶಯ ಸಲ್ಲಿಸುವುದಾಗಿ ತಿಳಿಸಿದರು.

ಅಧ್ಯಕ್ಷ ಜಿ.ಕೆ.ಮಧು ಮಾತನಾಡಿ, ಕಸಬಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಹಿಂದೆ ಅಧ್ಯಕ್ಷರಾಗಿದ್ದವರೆಲ್ಲ ಸಂಘವನ್ನು ಅಭಿವೃದ್ಧಿಯತ್ತ ಮುನ್ನಡೆಸಿದ್ದಾರೆ. ಅವರೆಲ್ಲರ ಮಾರ್ಗದರ್ಶನ, ಸಲಹೆ ಪಡೆದು ಸಂಘವನ್ನು ನಡೆಸಿಕೊಂಡು ಹೋಗುವ ಜತೆಗೆ ನಮ್ಮ ನಾಯಕರಾದ ತಾಲೂಕಿನ ನೀರಾವರಿ ಹರಿಕಾರ, ಭಗೀರಥ ಬಾಲಕೃಷ್ಣ ಅವರಿಂದ ಹೆಚ್ಚಿನ ಅನುದಾನ ತಂದು ರೈತರಿಗೆ ಮತ್ತಷ್ಟು ಸಾಲ ನೀಡುತ್ತೇನೆ ಎಂದು ಭರವಸೆ ನೀಡಿದರು.

ಕಸಬಾ ಸೊಸೈಟಿಯಲ್ಲಿ 7.98 ಕೋಟಿ ರೂ. ಬೆಳೆ ಸಾಲ ನೀಡಲಾಗಿದೆ. ಹೈನುಗಾರಿಕೆಗೆ 6.70 ಲಕ್ಷ ರೂ., ಮಧ್ಯಮಾವಧಿ ಸಾಲವಾಗಿ 1.21 ಕೋಟಿ ರೂ. ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸೊಸೈಟಿ ನಿರ್ದೇಶಕರಾದ ಸುರೇಶ್ ಬಾಳೆಮಂಡಿ, ಕೆ.ಎಸ್.ಮಂಜಪ್ಪ, ಕೆ.ಎನ್.ಬೋರೆಗೌಡ, ಎಂ.ವಿ.ನಂಜುಂಡಸ್ವಾಮಿ, ಬಿ.ಕೆ.ಲತಾ, ಗೋವಿಂದಯ್ಯ, ಇಒ ರಮೇಶ್‌ಕುಮಾರ್, ಸಿಬ್ಬಂದಿ ಲೋಕೇಶ್, ಮಣಿ, ಗಿರೀಶ್ ಸೇರಿ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಇತರರು ಇದ್ದರು.