ಧಾರವಾಡ: ನವದೆಹಲಿಯ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗಾಗಿ ಸಂಶೋಧನಾ ಮಾಹಿತಿ ಮತ್ತು ಮಾಹಿತಿ ವ್ಯವಸ್ಥೆಯ ಸಂಸ್ಥೆ ಮತ್ತು ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಜಿ- 20 ಶೃಂಗಸಭೆಯ ಪ್ರಯುಕ್ತ ಜಿ- 20 ಯುನಿರ್ವಸಿಟಿ ಕನೆಕ್ಟ್' ಎಂಬ ವಿನೂತನ ಕಾರ್ಯಕ್ರಮವನ್ನು ಸೆ. 12ರಂದು ಬೆಳಗ್ಗೆ 10.30೦ಕ್ಕೆ ಕವಿವಿಯ ಸುವರ್ಣ ಮಹೋತ್ಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಹೇಳಿದರು.
ನಗರದ ಕವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ದೇಶದ ೭೫ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಿ- ೨೦ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ರಾಜ್ಯದ ಧಾರವಾಡ ಮತ್ತು ಮೈಸೂರು ವಿಶ್ವವಿದ್ಯಾಲಯಗಳಲ್ಲೂ ಕಾರ್ಯಕ್ರಮ ಜರುಗಲಿದೆ ಎಂದರು. ಕಾರ್ಯಕ್ರಮದ ಸಂಯೋಜಕ ಪ್ರೊ. ಬಿ.ಎಚ್. ನಾಗೂರ ಮಾತನಾಡಿ, ಆನ್‌ಲೈನ್ ಮೂಲಕ ೫೦೦ ವಿದ್ಯಾರ್ಥಿಗಳು ಹೆಸರು ನೋದಾಯಿಸಿಕೊಂಡಿದ್ದಾರೆ. ವಿಶೇಷ ಉಪನ್ಯಾಸ ಮತ್ತು ಚರ್ಚೆಗಳು ನಡೆಯಲಿವೆ. ನವದೆಹಲಿಯ ಜಿ.ಎ. ತಡಸ್ ಅವರುಜಿ- ೨೦ ಭಾರತದ ಅಧ್ಯಕ್ಷತೆ: ಭವಿಷ್ಯದ ಅವಕಾಶಗಳು' ವಿಷಯ ಕುರಿತು ಮಾತನಾಡುವರು. ಪ್ರೊ. ಗೋವಿಂದರಾವ್ ಅವರು `ಭಾರತದ ಅಧ್ಯಕ್ಷತೆಯಲ್ಲಿ ಜಿ- ೨೦ ದೇಶಗಳು' ವಿಷಯ ಕುರಿತು ಮಾತನಾಡುವರು. ಪ್ರೊ. ಕೆ.ಬಿ. ಗುಡಸಿ ಅಧ್ಯಕ್ಷತೆ ವಹಿಸುವರು. ನಂತರ ಚರ್ಚಾಗೋಷ್ಠಿ ನಡೆಯಲಿದೆ ಎಂದರು.
ಪ್ರಭಾರ ಕುಲಸಚಿವೆ ಪ್ರೊ. ಚಂದ್ರಮಾ ಎಂ., ಪ್ರೊ. ಬಿ.ಎಚ್. ನಾಗೂರ, ಇತರರಿದ್ದರು.