ಹೂವಿನಹಡಗಲಿಯ ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ನಿವೃತ್ತ ಶಿಕ್ಷಕರು ಮತ್ತು ಪ್ರಾಚಾರ್ಯರಿಗೆ ಬೀಳ್ಕೊಡುವ ಕಾರ್ಯಕ್ರಮವನ್ನು ಶಾಸಕ ಕೃಷ್ಣನಾಯ್ಕ ಉದ್ಘಾಟಿಸಿದರು. 
ಜಿಲ್ಲೆ

ಭವಿಷ್ಯ ರೂಪಿಸುವ ಶಿಕ್ಷಕರ ಗೌರವಿಸಿ- ಶಾಸಕ ಕೃಷ್ಣನಾಯ್ಕ ಕಿವಿಮಾತು

ಹೂವಿನಹಡಗಲಿ: ಪಾಲಕರು ಜನ್ಮ ನೀಡಿದರೆ, ಗುರುಗಳು ಮಕ್ಕಳಿಗೆ ಶಿಕ್ಷಣ ನೀಡುವುದರ ಜತೆಗೆ ಸಂಸ್ಕಾರ ಕಲಿಸಿ ಉತ್ತಮ ಪ್ರಜೆಗಳನ್ನಾಗಿಸುತ್ತಾರೆ. ಅವರನ್ನು ಗೌರವದಿಂದ ಕಾಣುವುದು ಎಲ್ಲರ ಕರ್ತವ್ಯ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವಿವಿಧ ಸಂಘಟನೆಗಳ ಉದ್ಘಾಟನೆ ಹಾಗೂ ನಿವೃತ್ತ ಶಿಕ್ಷಕರು ಮತ್ತು ಪ್ರಾಚಾರ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಣ ಪಡೆಯುವುದರಿಂದ ನಮ್ಮ ಕುಟುಂಬ, ಗ್ರಾಮ ಮತ್ತು ದೇಶ ಅಭಿವೃದ್ಧಿಯಾಗುತ್ತದೆ. ನಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಲು ಶಿಕ್ಷಣ ಸಹಕಾರಿಯಾಗಿದೆ. ಗುರುಗಳು ಶಿಕ್ಷಣ ನೀಡಿ, ಭವಿಷ್ಯವನ್ನು ಸುಂದರಗೊಳಿಸುತ್ತಾರೆ ಎಂದರು.

ಕ್ಷೇತ್ರದಲ್ಲಿ ಶಿಕ್ಷಣಕ್ಕ್ಕೆ ಮೊದಲ ಆದ್ಯತೆ ನೀಡುತ್ತಿದ್ದು, ತಾಲೂಕಿನ ಪ್ರತಿ ಶಾಲೆಗೂ ಮೂಲಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕೆ ಜನರು ಮತ್ತು ಶಿಕ್ಷಕರು, ಶಾಲಾ ಸಿಬ್ಬಂದಿ ಸಹಕಾರ ಮುಖ್ಯವಾಗಿದೆ ಎಂದರು.

ಉಪನ್ಯಾಸಕರ ಸಂಘದ ತಾಲೂಕು ಅಧ್ಯಕ್ಷ ಬಸೆಟ್ಟಿ ಪ್ರಕಾಶ, ಶಿಕ್ಷಕ ಸಾಬುದ್ದೀನ್ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಷಣ್ಮುಖಪ್ಪ ಬಾಗವಾಡ, ನಿವೃತ್ತ ಉಪನ್ಯಾಸಕರಾದ ಕೆ.ದ್ಯಾಮಜ್ಜ, ಬಸವರಾಜಪ್ಪ ಇತರರಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು.

ಪ್ರಾಚಾರ್ಯ ಅಯ್ಯನಗೌಡರ ಕೊಟ್ರಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಚಾರ್ಯ ಚಂದ್ರೇಗೌಡ ಇತರರಿದ್ದರು. ಉಪಪ್ರಾಚಾರ್ಯ ಚಂದ್ರೇಗೌಡ ಇತರ ಸಿಬ್ಬಂದಿ ಇದ್ದರು.