ಜಿಲ್ಲೆ

ರಾಮನಗರದ 8ನೇ ವಾರ್ಡ್ ನಲ್ಲಿ ಆಗಬೇಕಿದೆ ಮತ್ತಷ್ಟು ಅಭಿವೃದ್ಧಿ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಅರ್ಕಾವತಿ ನದಿ ಎರಡೂ ದಂಡೆಯಲ್ಲಿ ವಿಸ್ತರಿಸಿಕೊಂಡಿರುವ ಹಾಗೂ ಪ್ರಮುಖ ವಾಣಿಜ್ಯ ಚಟುವಟಿಕೆ ಕೇಂದ್ರವಾಗಿ ರಾಮನಗರದ ಹೃದಯ ಭಾಗದಲ್ಲಿ ಗುರುತಿಸಿಕೊಂಡಿರುವ 8ನೇ ವಾರ್ಡ್ ಅಭಿವೃದ್ಧಿ ಕಂಡಿದ್ದರೂ ಮತ್ತಷ್ಟು ಅಭಿವೃದ್ಧಿ ಆಗಬೇಕಿದೆ.

ಅರ್ಕಾವತಿ ನದಿಯು ವಾರ್ಡಿನ ವ್ಯಾಪ್ತಿಯಲ್ಲಿ ಹರಿಯುತ್ತದೆ. ಅಲ್ಲದೇ, ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬಹುದಾಗಿದೆ. ಸರ್ಕಾರ ಮನಸ್ಸು ಮಾಡಿ ಮೈಸೂರು ಕೆಆರ್‌ಎಸ್ ಮಾದರಿಯಲ್ಲಿ ಅರ್ಕಾವತಿ ನದಿಗೆ ಜೀವಕಳೆ ತಂದರೆ ನಗರ ಮತ್ತು ವಾರ್ಡ್ ಅಭಿವೃದ್ಧಿಯಲ್ಲಿ ಸಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಇತರ ವಾರ್ಡ್‌ಗಳಿಗಿಂತ ವಿಶೇಷತೆ : ರಾಮನಗರದ ನಗರಸಭೆಯ ಇತರ ವಾರ್ಡ್‌ಗಳಿಗೆ ಹೋಲಿಸಿಕೊಂಡರೆ 8ನೇ ವಾರ್ಡ್ ವಿಶೇಷತೆಗಳಲ್ಲಿ ಬಹಳಷ್ಟು ವಿಶೇಷತೆ ಹೊಂದಿದೆ.

ವಾರ್ಡ್ ವ್ಯಾಪ್ತಿಯಲ್ಲಿ ಕೋರ್ಟ್, ತಾಲೂಕು ಆಡಳಿತ ಸೌಧ, ಬೆಂಗಳೂರು-ಮೈಸೂರು ರಸ್ತೆ, ಪ್ರಮುಖ ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು, ಹೋಟೆಲ್‌ಗಳು, ಪೆಟ್ರೋಲ್ ಬಂಕ್, ಕಲ್ಯಾಣ ಮಂಟಪ, ಬಲಮುರಿ ಗಣಪತಿ, ಆದಿಶಕ್ತಿ, ಸಾಯಿಬಾಬಾ ದೇಗುಲ, ಬಸವೇಶ್ವರ ದೇವಸ್ಥಾನಗಳ ತೆಗೆ ಮುಖ್ಯರಸ್ತೆಯಲ್ಲಿ ದರ್ಗಾ ಕೂಡ ಇದೆ. ವಿಶೇಷವಾಗಿ ವಾರ್ಡಿನಲ್ಲಿ ಹಳೇ ಬಸ್ ನಿಲ್ದಾಣವಿದ್ದು ಸಮೀಪದಲ್ಲೇ ಡಾ. ಬಿ.ಆರ್. ಅಂಬೇಡ್ಕರ್ ಭವನ, ಕೆಂಗಲ್ ಹನುಮಂತಯ್ಯ ಪ್ರತಿಮೆ ಕೂಡ ವಾರ್ಡಿನ ಕಿರೀಟಕ್ಕೆ ಮತ್ತಷ್ಟು ಗರಿ ಸೇರಿಸಿದಂತಾಗಿದೆ.

ನೀರಿನ ಸಮಸ್ಯೆ :

8ನೇ ವಾರ್ಡ್ ಅರ್ಕಾವತಿ ನದಿ ದಂಡೆಯಲ್ಲಿದ್ದರೂ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. 10-12 ದಿನಕ್ಕೊಮ್ಮೆ ನೀರು ಸರಬರಾಜಗುತ್ತಿದೆ. ರಾಘವೇಂದ್ರ ಕಾಲನಿ, ಕರಗದಬೀದಿ, ಆದಿಶಕ್ತಿಪುರ, ಮಂಡೀಪೇಟೆ ಹಳೇ ಬಸ್‌ನಿಲ್ದಾಣ ಸುತ್ತಮುತ್ತಲ ಜನವಸತಿ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಬಿಸಿನೆಸ್ ಸ್ಪಾಟ್ :

ರಾಮನಗರದ ಪ್ರಮುಖ ವಾಣಿಜ್ಯ ಚಟುವಟಿಕೆ ಕೇಂದ್ರವಾಗಿ 8ನೇ ವಾರ್ಡ್ ಗುರುತಿಸಿಕೊಂಡಿದೆ. ಐಜೂರು ವೃತ್ತದಿಂದ ಹಳೇ ಬಸ್ ನಿಲ್ದಾಣ, ಕೋರ್ಟ್ ರಸ್ತೆ, ಅರ್ಕಾವತಿ ನದಿ ದಾಟಿ ಮಂಡಿಪೇಟೆವರೆಗೆ ವ್ಯಾಪಾರ ಕೇಂದ್ರ ವಿಸ್ತರಿಸಿಕೊಂಡಿದೆ. ವಾರ್ಡಿನ ಹಳೇ ಬಸ್ ನಿಲ್ದಾಣ, ಅರ್ಕಾವತಿ ನದಿ ಸೇತುವೆ ಪಕ್ಕ, ಕೋರ್ಟ್ ರಸ್ತೆ, ಐಜೂರು ಬಸ್ ನಿಲ್ದಾಣ, ಕಾರ್ ಸ್ಟಾೃಂಡ್ ಸಮೀಪ ಮತ್ತಿತರ ಸ್ಥಳಗಳಲ್ಲಿ ಹೆಚ್ಚಿನ ಬೀದಿ ಬದಿ ವ್ಯಾಪಾರಿಗಳು ಹೂ, ಹಣ್ಣು, ತರಕಾರಿ, ಇನ್ನಿತರ ವಸ್ತುಗಳನ್ನು ಮಾರಾಟ ಮಾಡುತ್ತಾ ಜೀವನ ಕಟ್ಟಿಕೊಂಡಿದ್ದಾರೆ.

ವಾರ್ಡ್‌ವ್ಯಾಪ್ತಿ : ಮಂಡಿಪೇಟೆ, ರಾಘವೇಂದ್ರ ಕಾಲನಿ, ಕರಗದಬೀದಿ, ಹಳೇ ಬಸ್‌ನಿಲ್ದಾಣ, ಕನಕಪುರ ಸರ್ಕಲ್, ಕೋರ್ಟ್ ರಸ್ತೆ ಆದಿಶಕ್ತಿಪುರ, ಬೆಂಗಳೂರು-ಮೈಸೂರು ರಸ್ತೆ, ವಿವೇಕಾನಂದ ನಗರದವರೆಗೆ ವಾರ್ಡ್‌ವ್ಯಾಪ್ತಿ ಹೊಂದಿದೆ.

ವಾರ್ಡಿನ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಲಾಗಿದೆ. 30ಲಕ್ಷ ರೂ.ವೆಚ್ಚದಲ್ಲಿ ಹಿಂದು ರುದ್ರಭೂಮಿಗೆ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗುತ್ತಿದೆ. ಜತೆಗೆ ಹೆಚ್ಚಿನ ವಾಣಿಜ್ಯ ಪ್ರದೇಶವಿರುವ ಕಾರಣ ಇಲ್ಲಿ ಉತ್ಪತ್ತಿಯಾಗುವ ಕಸ ಸಂಗ್ರಹಣೆಗೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಹೈಟೆಕ್ ಮಳಿಗೆ ಮತ್ತು ಅರ್ಕಾವತಿ ನದಿ ಅಭಿವೃದ್ಧಿಗೆ ವಿಶೇಷ ಗಮನ ನೀಡುವಂತೆ ನಗರಸಭೆ ಮುಖಾಂತರ ಸರ್ಕಾರದ ಗಮನಕ್ಕೆ ತರಲಾಗಿದೆ.

ಮಂಜುಳಾ ವೆಂಕಟೇಶ್, ನಗರಸಭೆ ಸದಸ್ಯೆ, ವಾರ್ಡ್ ನಂ.8.ರಾಮನಗರ.ಮೊ : 9686107105

ಅಭಿವೃದ್ಧಿ ಕೆಲಸಗಳು

ಅರ್ಕಾವತಿ ನದಿ ಸೇತುವೆ ಎರಡೂ ಬದಿಯಲ್ಲಿ ನಗರಸಭೆ ವತಿಯಿಂದ ಕಬ್ಬಿಣದ ಗ್ರಿಲ್ ಅಳವಡಿಕೆ. ಹಿಂದು ರುದ್ರಭೂಮಿಗೆ ಕಾಂಕ್ರೀಟ್ ರಸ್ತೆ. ಡಾ. ಬಿ.ಆರ್.ಅಂಬೇಡ್ಕರ್ ಭವನಕ್ಕೆ ಬಣ್ಣ, ಮೂಲಸೌಕರ್ಯ.

ಏನೇನು ಆಗಬೇಕಿದೆ?

ಅರ್ಕಾವತಿ ನದಿ ಶುದ್ಧೀಕರಣ, ನದಿ ದಂಡೆಯಲ್ಲಿ ಸಂಗೀತ ಕಾರಂಜಿ ನಿರ್ಮಾಣ, ವಾರ್ಡಿನ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ವೈಜ್ಞಾನಿಕವಾಗಿ ಚರಂಡಿ ನಿರ್ಮಾಣ, ರಸ್ತೆ ನಿರ್ಮಾಣ, ಬೀದಿ ಬದಿ ವ್ಯಾಪಾರಿಗಳಿಗೆ ಸುಸಜ್ಜಿತ ಮಳಿಗೆ ವ್ಯವಸ್ಥೆ, ಗಾಂಧಿ ಪಾರ್ಕ್‌ಗೆ ಮತ್ತಷ್ಟು ಅಭಿವೃದ್ಧಿಗೆ ಕಾಯಕಲ್ಪ, ಎಲ್‌ಇಡಿ ಬೀದಿ ದೀಪ ಅಳವಡಿಕೆ, ಅರ್ಕಾವತಿ ನದಿಗೆ ಹರಿಯುತ್ತಿರುವ ಚರಂಡಿ ನೀರು ತಪ್ಪಿಸುವುದು. ಮೈಸೂರು ಕಡೆಗೆ ತೆರಳುವ ಪ್ರಯಣಿಕರಿಗೆ ಸುಸಜ್ಜಿತ ಬಸ್ ನಿಲ್ದಾಣ, ಹಳೇ ಬಸ್‌ನಿಲ್ದಾಣ ಅಭಿವೃದ್ಧಿ, ಗುಂಡಿ ಬಿದ್ದ ರಸ್ತೆಗಳಿಗೆ ಕಾಯಕಲ್ಪ ಮತ್ತು ಹೊಸ ಡಾಂಬರೀಕರಣ. ಹಳೇ ಬಸ್ ನಿಲ್ದಾಣ ಸಮೀಪ ಸುಸಜ್ಜಿತ ಹೈಟೆಕ್ ಶೌಚಗೃಹ ನಿರ್ಮಾಣ.