ಸೋಮವಾರಪೇಟೆ: ಅತ್ಯಂತ ಕಡಿಮೆ ಬೆಲೆಗೆ ಪೀಠೋಪಕರಣ ಮಾರಾಟ ಮಾಡುತ್ತಿದ್ದ ವರ್ತಕ ಹಲವು ಜನರಿಂದ ಮುಂಗಡ ಪಡೆದು ಅಂಗಡಿ ತೆರೆಯದೆ ಇರುವುದರಿಂದ ಆತಂಕಗೊಂಡ ಗ್ರಾಹಕರು ಮಂಗಳವಾರ ಅಂಗಡಿ ಮುಂದೆ ಜಮಾಯಿಸಿದ್ದರು.
ಪಟ್ಟಣದ ಎಂ.ಜಿ.ರಸ್ತೆಯ ದೂಪದ್ ಕಾಂಪ್ಲೆಕ್ಸ್‌ನಲ್ಲಿ ಕಳೆದ ಎರಡು ತಿಂಗಳಿನಿಂದ ತಮಿಳುನಾಡು ಮೂಲದ ಬಾಬು ಕೇಶವನ್ ಹಾಗೂ ಕೆಲವರು ಮಹಿಟ್ರೇಡರ್ಸ್ ಹೆಸರಿನಲ್ಲಿ ಪಟ್ಟಣ ಪಂಚಾಯಿತಿಯಿಂದ ವ್ಯಾಪಾರೋದ್ಯಮ ಪರವಾನಗಿ ಪಡೆದು ಪೀಠೋಪಕರಣ ಸೇರಿದಂತೆ ಮತ್ತಿತರ ಗೃಹೋಪಯೋಗಿ ವಸ್ತುಗಳು ಅಂಗಡಿ ತೆರೆದಿದ್ದರು. ರಿಯಾಯಿತಿ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು. ತಾವು ಖರೀದಿಸುವ ವಸ್ತುಗಳ ಹಣವನ್ನು ಮುಂಚಿತವಾಗಿಯೇ ಕೊಟ್ಟು ಹತ್ತು ದಿನಗಳ ನಂತರ ವಸ್ತುಗಳನ್ನು ಪಡೆಯಬೇಕಾಗಿತ್ತು.
ಈ ರೀತಿಯಾಗಿ ಹಲವು ಮಂದಿ ಸೋಫಾ ಸೆಟ್, ಮಂಚ, ವಾರ್ಡ್‌ರೋಬ್, ಡ್ರೆಸ್ಸಿಂಗ್ ಟೇಬಲ್, ಚೇರ್ ಮುಂತಾದ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಒಂದೆಡೆ ಸ್ಥಳೀಯ ಪೀಠೋಪಕರಣ ಅಂಗಡಿಯವರ ಕೆಂಗಣ್ಣಿಗೆ ಗುರಿಯಾದರೆ, ಮತ್ತೊಂದೆಡೆ ವಿಚಾರ ಊರೆಲ್ಲ್ಲ ಹರಡಿ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಪಡೆಯಲು ನಾಗರಿಕರು ನಾ ಮುಂದು, ತಾಮುಂದು ಎಂದು ಹಣ ನೀಡಿ ಬುಕ್ ಮಾಡಿದ್ದರು. ಆದರೆ ಇಂದು ಬೆಳಗ್ಗೆ ಅಂಗಡಿ ತೆರೆಯದಿದ್ದರಿಂದ ವಿಚಾರ ತಿಳಿದ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಅಂಗಡಿ ಮುಂದೆ ಜಮಾಯಿಸಿ ಕೂಗಾಡ ತೊಡಗಿದರು.
ಕೆಲವರು ಅಂಗಡಿ ಬೀಗ ಒಡೆದು ಒಳಗಿರುವ ವಸ್ತುಗಳನ್ನು ತೆಗೆದುಕೊಳ್ಳಲು ಚರ್ಚೆ ನಡೆಸುತ್ತಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಅಂಗಡಿ ಹಾಗೂ ಕೆಲ ವಸ್ತುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಅಂಗಡಿ ಮಾಲೀಕನ ವಿರುದ್ಧ ದೂರು ನೀಡಲು ತಿಳಿಸಿದರು. ಈ ಹಿನ್ನೆಲೆಯಲ್ಲಿ ಕೆಲವರು ದೂರು ನೀಡಿದ್ದಾರೆ.
ಪೀಠೋಪಕರಣ ಅಂಗಡಿಯ ವ್ಯವಹಾರ ನೋಡಿ ಅನುಮಾನಗೊಂಡ ಚೆಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಡಿ.28 ರಂದು ಸ್ಥಳೀಯ ಪೊಲೀಸರಿಗೆ ದೂರು ನೀಡಿ, ಅತ್ಯಂತ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಸ್ಥಳೀಯ ವರ್ತಕರಿಗೆ ತೊಂದರೆ ಆಗುತ್ತಿದೆ. ಜಿಎಸ್‌ಟಿ ಇಲ್ಲದೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಮುಂಗಡವಾಗಿ ಹಣ ಪಡೆಯುತಿರುವುದರಿಂದ ಮುಂದಿನ ದಿನಗಳಲ್ಲಿ ವಂಚನೆಯಾಗುವ ಸಾಧ್ಯತೆ ಇರುವುದರಿಂದ ಪರಿಶೀಲಿಸಿ ಕ್ರಮ ವಹಿಸಬೇಕೆಂದು ಕೇಳಿಕೊಂಡಿದ್ದಾರೆ. ಪೊಲೀಸರು ಕ್ರಮ ಕೈಗೊಳ್ಳುವ ಮುನ್ನವೆ ಸೋಮವಾರ ರಾತ್ರಿಗೆ ವ್ಯಾಪಾರಿ ನಾಪತ್ತೆಯಾಗಿದ್ದಾನೆ.