ಸರಗೂರು: ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ಸ್ಮಶಾನ ಇಲ್ಲದೆ ಅಂತ್ಯಸಂಸ್ಕಾರಕ್ಕೆ ಜನರು ಪರದಾಡುವಂತಾಗಿದೆ.
ಗ್ರಾಮದ ಕಬಿನಿ ಹೊಳೆಯ ಬಳಿ ಇರುವ ಭೂಮಿಯಲ್ಲಿ ಹಿಂದಿನಿಂದಲೂ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಅದರಂತೆ ಗ್ರಾಮದಲ್ಲಿ ಮೃತಪಟ್ಟಿದ್ದ ದೇವಮ್ಮ ಅಂತ್ಯಕ್ರಿಯೆಗಾಗಿ ಬುಧವಾರ ಸ್ಮಶಾನಕ್ಕೆ ಬಂದಾಗ ಸ್ಮಶಾನ ಭೂಮಿ ಒತ್ತುವರಿ ಮಾಡಿಕೊಂಡಿದ್ದ ಜಮೀನು ಮಾಲೀಕ ತಡೆಯೊಡ್ಡಿದರು. ಕುಟುಂಬಸ್ಥರು, ಗ್ರಾಮಸ್ಥರ ಮನವಿ ಬಳಿಕ ಅಂತ್ಯಕ್ರಿಯೆಗೆ ಅನುವು ಮಾಡಿಕೊಟ್ಟರು.
ಗ್ರಾಪಂ ಸದಸ್ಯ ಚಲುವಪ್ಪ ಮಾತನಾಡಿ, ಗ್ರಾಮದಲ್ಲಿ ಮೃತರ ಅಂತ್ಯಸಂಸ್ಕಾರ ಮಾಡಲು ಸ್ಮಶಾನ ಇದ್ದರೂ ಸಮೀಪ ರೈತರೊಬ್ಬರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಶವಸಂಸ್ಕಾರಕ್ಕೆ ತೊಂದರೆಯಾಗಿದೆ. ಗ್ರಾಮಸ್ಥರು ಕಬಿನಿ ಹೊಳೆಯ ಬಳಿ ಇರುವ ಈ ಜಾಗದಲ್ಲಿ ಹಿಂದಿನಿಂದಲೂ ಅಂತ್ಯಸಂಸ್ಕಾರ ಮಾಡಿಕೊಂಡು ಬರುತ್ತಿದ್ದಾರೆ. ಗ್ರಾಮದಲ್ಲಿ 12 ಸಮುದಾಯಗಳು ಇವೆ. 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೆ ಸ್ಮಶಾನ ಭೂಮಿ ಇದ್ದರೂ ಇಲ್ಲದಂತದಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ಸ್ಮಶಾನ ಭೂಮಿಯ ಹದ್ದುಬಸ್ತು ಗುರುತಿಸಿ ಒತ್ತುವರಿ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.