ಜಿಲ್ಲೆ

ಪಾಲಿಕೆಗೆ ಬರಲಿವೆ ವಿಶಿಷ್ಟ ವಿನ್ಯಾಸದ ಮುಕ್ತಿವಾಹನ!

ಮಂಜುನಾಥ ಗದಗಿನ

ಧರ್ಮರಾಜ ಪಾಟೀಲ ಬೆಳಗಾವಿ

ಮೃತರ ಅಂತ್ಯಸಂಸ್ಕಾರಕ್ಕಾಗಿ ಪಾಲಿಕೆಯಿಂದ ಎರಡು ಮುಕ್ತಿ ವಾಹನ ಖರೀದಿಸಲು ಸಿದ್ಧತೆ ನಡೆಸಿದೆ. ಮೈಸೂರಿನಲ್ಲಿರುವ ಅತ್ಯಾಕರ್ಷಕ ವಿನ್ಯಾಸದ ಮಾದರಿಯಲ್ಲಿ ಮುಕ್ತಿವಾಹನಗಳ ಖರೀದಿಗೆ ಬೆಳಗಾವಿ ಪಾಲಿಕೆ ಮುಂದಾಗಿದೆ.

ಬೆಳಗಾವಿ ನಗರದಲ್ಲಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಿಗೆ ಎರಡು ತೆರೆದ ಮುಕ್ತಿ ವಾಹನಗಳ ಸೇವೆ ಶೀಘ್ರ ಆರಂಭವಾಗಲಿವೆ. ಈ ನಿಟ್ಟಿನಲ್ಲಿ ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಎರಡು ವಾಹನ ಖರೀದಿಸಲು ತೀರ್ಮಾನ ಕೈಗೊಂಡು ಪಾಲಿಗೆ ಬಜೆಟ್‌ನಲ್ಲಿ 40 ಲಕ್ಷ ರೂ. ಮಂಜೂರು ಮಾಡಲಾಗಿದೆ.

ಪ್ರಸ್ತುತ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂರು ಮುಕ್ತಿ ವಾಹನಗಳು ಅಷ್ಟೊಂದು ಸುವ್ಯವಸ್ಥಿತವಾಗಿಲ್ಲ. ವಾಹನಗಳಿಗೆ ಮಾಲೆ ಹಾಕಿ ಸಿಂಗರಿಸುವುದರ ಜತೆಗೆ ಕನಿಷ್ಠ ಜನರು (ಕುಟುಂಬಸ್ಥರು) ಕುಳಿತುಕೊಳ್ಳಲು ಜಾಗವಿಲ್ಲದಾಗಿದೆ. ಹೀಗಾಗಿ ಈ ವಾಹನಗಳನ್ನು ಜನರು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಪಾಲಿಕೆ ಹೊಸದಾಗಿ ಖರೀದಿಸಲು ಮುಂದಾಗಿರುವ ಮುಕ್ತಿ ವಾಹನದಲ್ಲಿ ನಾಲ್ಕು ಕಡೆ ಗಾಜಿನ ಗ್ಲಾಸ್ ಅಳವಡಿಸಿ ನೋಡುಗರಿಗೆ ಮೃತರ ಮುಖ ಕಾಣುವ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನೂ ಸುತ್ತಲೂ ಆಕರ್ಷಕ ಅಲಂಕಾರ ಹಾಗೂ ಮೇಲ್ಭಾಗದಲ್ಲಿ ಸಿಂಗಾರಗೊಂಡ ಮಂಟಪದ ವಿನ್ಯಾಸ ಇರಲಿದೆ. ವಾಹನದ ಮೇಲೆ ದೇವರ ನಾಮಸ್ಮರಣೆ ಪಠಿಸುವ ಧ್ವನಿವರ್ಧಕ ಅಳವಡಿಸಲಾಗುತ್ತಿದೆ.

ಒಂದು ತಿಂಗಳಲ್ಲಿ ಸೇವೆಗೆ:ಬೆಳಗಾವಿ ಮಹಾನಗರ ಪಾಲಿಕೆ ಆಡಳಿತ ಮತ್ತು ವಿರೋಧ ಪಕ್ಷದ ಕೌನ್ಸಿಲರ್‌ಗಳು ಅಧ್ಯಯನಕ್ಕಾಗಿ ಕೆಲ ದಿನಗಳ ಹಿಂದೆ ಮೈಸೂರು ಪ್ರವಾಸ ಕೈಗೊಂಡಿದ್ದರು. ಅಲ್ಲಿನ ಮಹಾನಗರ ಪಾಲಿಕೆ ಕ್ರಿಯಾತ್ಮಕ ಕಾರ್ಯ ಚಟುವಟಿಕೆ ಸೇರಿ ವಿವಿಧ ಮಾಹಿತಿ ಪಡೆದರು. ಆಕರ್ಷಕವಾದ ಮುಕ್ತಿ ವಾಹನ ಗಮನಿಸಿ ಅದೇ ಮಾದರಿಯಲ್ಲಿ ಬೆಳಗಾವಿಯಲ್ಲೂ ಅಂತ್ಯ ಸಂಸ್ಕಾರ ವಾಹನ ಖರೀದಿಗೆ ಯೋಜನೆ ರೂಪಿಸಿದೆ. ಅಂದುಕೊಂಡರೆ ಯೋಜನೆ ಜಾರಿಯಾದರೆ ಒಂದು ತಿಂಗಳಲ್ಲಿ ವಿಶಿಷ್ಟ ವಿನ್ಯಾಸದ ಮುಕ್ತಿವಾಹನಗಳು ಸೇವೆಗೆ ಸಿದ್ಧವಾಗಲಿವೆ.

ಮೈಸೂರು ಮಾದರಿಯಲ್ಲೇ ಬೆಳಗಾವಿಯಲ್ಲಿ ಮುಕ್ತಿ ವಾಹನ ಖರೀದಿಸಲು ತೀರ್ಮಾನಿಸಲಾಗಿದೆ. ಈಚೆಗೆ ನಡೆದ ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಎರಡು ಮುಕ್ತಿ ವಾಹನ ಖರೀದಿಸಲು ನಿರ್ಧರಿಸಲಾಗಿದೆ. ಅದರಂತೆ ವಿಶಿಷ್ಟ ವಿನ್ಯಾಸದ ವಾಹನ ತಯಾರಾಗಲಿವೆ. ಶ್ರೀಶೈಲ ಕಾಂಬಳೆ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ 40 ಲಕ್ಷ ರೂ.ದಲ್ಲಿ ಎರಡು ವಾಹನ ಶೀಘ್ರದಲ್ಲಿ ಖರೀದಿಸಲಾಗುವುದು. ಬೆಳಗಾವಿ ಹವಾಮಾನಕ್ಕೆ ತಕ್ಕಂತೆ ಬಾಳಿಕೆ ಬರುವಂತಹ ಹಾಗೂ ಬಿಸಿಲು, ಮಳೆಯಲ್ಲೂ ಶವ ಸಾಹಿಸಲು ತೊದರೆಯಾಗದಂತೆ ಜನರಿಗೆ ವೀಕ್ಷಿಸಲು ವಾಹನದ ನಾಲ್ಕೂ ಬದಿಯಲ್ಲಿ ಗಾಜಿನಿಂದ ಅಲಂಕಾರ ಮಾಡಲಾಗುವುದು. ಶುಭ ಬಿ. ಪಾಲಿಕೆ ಆಯುಕ್ತೆ.