ನರಗುಂದ: ಬಿಜೆಪಿ ಸರ್ಕಾರದಲ್ಲಿ 6 ವಿವಿಧ ಇಲಾಖೆಗಳ ಸಚಿವನಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳಿಂದ ಅನುದಾನ ತರುವ ತಾಕತ್ತು ನನಗಿದೆ. ಆದರೆ, ನರಗುಂದದಲ್ಲಿ ಸಾಕಷ್ಟು ಟೋಲ್ ನಾಕಾ ಹುಟ್ಟಿಕೊಂಡಿರುವುದರಿಂದ ಪೂರಕ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ತರಲು ವಿಪರೀತ ಸಮಸ್ಯೆ ಉಂಟಾಗುತ್ತಿದೆ ಎಂದು ಶಾಸಕ ಸಿ.ಸಿ. ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದ ಕಿರುಸೇತುವೆ ನಿರ್ವಣ, 49.98 ಲಕ್ಷ ರೂ.ವೆಚ್ಚದ ಪಶು ಆಸ್ಪತ್ರೆ ನೂತನ ಕಟ್ಟಡ ನಿರ್ವಣ, 5 ಲಕ್ಷ ರೂ.ವೆಚ್ಚದ ಶ್ರೀ ಗಜಾನನ ಸಮುದಾಯ ಭವನ ನಿರ್ವಣಕ್ಕೆ ಭೂಮಿಪೂಜೆ ಹಾಗೂ 1.51 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ಕರ್ನಾಟಕ ಪಬ್ಲಿಕ್ ಶಾಲೆ, 10 ಲಕ್ಷ ರೂ.ವೆಚ್ಚದ ಅಂಗನವಾಡಿ ಕಟ್ಟಡ, 25 ಲಕ್ಷ ರೂ.ವೆಚ್ಚದಲ್ಲಿ ನಿರ್ವಿುಸಿರುವ ಮಹಿಳಾ ವರ್ಕ್ಶೆಡ್ ಹಾಗೂ ಗೋದಾಮು ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನರಗುಂದಕ್ಕೆ ಅಧಿಕಾರಿಯೊಬ್ಬರೂ ತನ್ನಷ್ಟಕ್ಕೆ ತಾನೇ ವರ್ಗಾವಣೆಯಾಗಿ ಬಂದರೆ ಇಲ್ಲಿನ ಹಿರಿಯ ರಾಜಕಾರಣಿಯೊಬ್ಬರು ಯಾರಿಗೆ ಹೇಳಿ ಬಂದಿದ್ದೀರಿ ಎಂದು ಗದರಿಸಿ ಅವರಿಂದ 35 ಸಾವಿರ ರೂ. ಹಣ ಪೀಕಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ. ನಾನು 6 ಬಾರಿ ಚುನಾವಣೆ ಎದುರಿಸಿ ಸೋಲು-ಗೆಲುವು ಕಂಡಿದ್ದೇನೆ. ಆದರೆ, ಇಷ್ಟೊಂದು ದರಿದ್ರ ಸರ್ಕಾರವನ್ನು ನನ್ನ ಜೀವನದಲ್ಲೇ ಕಂಡಿಲ್ಲ. 2 ಸಾವಿರ ರೂಪಾಯಿ ಆಸೆಗೆ ಮಹಿಳೆಯರು ಕಾಂಗ್ರೆಸ್ಗೆ ವೋಟ್ ಹಾಕಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ. ಕಾಂಗ್ರೆಸ್ ಬೆಲೆಯೇರಿಕೆ ಮಾಡಿರದ ವಸ್ತುಗಳಿಲ್ಲ ಎಂಬಂತಾಗಿದೆ. ಅಧಿಕಾರಕ್ಕೆ ಬಂದ ನಂತರ ಹಾಲು, ಮೊಸರು, ಬಸ್ ಟಿಕೆಟ್, ಇ-ಸ್ಟಾಪ್ ಸೇರಿದಂತೆ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಇದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆದರೆ ಬಿಜೆಪಿ 125 ಸ್ಥಾನ ಗೆಲ್ಲಲ್ಲಿದೆ ಎಂದರು.
ನಾಗನಗೌಡ ತಿಮ್ಮನಗೌಡ್ರ, ಮುತ್ತು ರಾಯರಡ್ಡಿ, ಮಲ್ಲವ್ವ ಮರಿಯಣ್ಣವರ, ಆರ್.ಬಿ. ರಾಚನಗೌಡ್ರ, ದೇಸಾಯಿಗೌಡ ಪಾಟೀಲ, ಶಿವಾನಂದ ಸಾತಣ್ಣವರ, ಚಂದ್ರು ದಂಡಿನ, ಬಿ.ಬಿ.ಐನಾಪೂರ, ಶೃತಿ ಬ್ಯಾಳಿ, ಎಸ್.ಎಂ. ಗಾಣಿಗೇರ, ಈರಣ್ಣ ಹೊಂಗಲ, ನಿಂಗಪ್ಪ ಗಾಣಿಗೇರ, ಶರಣಬಸಪ್ಪ ಹಳೇಮನಿ, ಬಸು ಪಾಟೀಲ, ಜಡಿಯಪ್ಪಗೌಡ ಚಿನ್ನಪ್ಪಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಗುರಪ್ಪ ಆದೆಪ್ಪನವರ, ಮಲ್ಲಪ್ಪ ಅರೆಬೆಂಚಿ, ಎಸ್.ಕೆ. ಇನಾಂದಾರ, ಕಮಲಾ ಹುಲಕೋಟಿ, ಡಾ.ಸಂತೋಷ ಕರಿಭರಮಣ್ಣವರ, ಡಾ. ಗುರುನಾಥ ಹೂಗಾರ, ಪ್ರಭು ಹುನಗುಂದ, ಎಸ್.ಬಿ. ಹಂಗರಗಿ, ಇತರರಿದ್ದರು.