ಮಡಿಕೇರಿ:
ಐತಿಹಾಸಿಕ ಮಡಿಕೇರಿ ದಸರಾವನ್ನು ಸಾರ್ವಜನಿಕರ ಸಹಕಾರದೊಂದಿಗೆ ಅದ್ಧೂರಿಯಾಗಿ ಆಚರಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದ್ದು, ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಡಿಕೇರಿ ನಗರಸಭೆ ಅಧ್ಯಕ್ಷರೂ ಆಗಿರುವ ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆ ಅನಿತಾಪೂವಯ್ಯ ಮನವಿ ಮಾಡಿದ್ದಾರೆ. ಸಾಂಪ್ರದಾಯಿಕ ಕರಗ ಪೂಜೆಯ ಮೂಲಕ ದಸರಾಕ್ಕೆ ಚಾಲನೆ ಸಿಗಲಿದೆ. ಕರಗಗಳು ೯ ದಿನಗಳ ಕಾಲ ನಗರ ಪ್ರದಕ್ಷಿಣೆ ಹಾಕಲಿವೆ. ಪ್ರಮುಖ ಆಕರ್ಷಣೆ ಆಗಿರುವ ದಶ ಮಂಟಪಗಳ ಶೋಭಾ ಯಾತ್ರೆಗೂ ಸಿದ್ಧ್ದತೆ ನಡೆದಿದೆ. ೯ ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಳನ್ನು ಆಯೋಜಿಸಲಾಗಿದೆ. ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಾಜ್ಯ, ರಾಷ್ಟ್ರಮಟ್ಟದ ಕಲಾವಿದರೂ ಪಾಲ್ಗೊಳ್ಳುತ್ತಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಹಿಳಾ ದಸರಾ, ಮಕ್ಕಳ ದಸರಾ, ಜಾನಪದ ದಸರಾ, ಕ್ರೀಡಾ ದಸರಾ ಆಯೋಜಿಸಲಾಗಿದೆ. ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ನಗರದ ರಸ್ತೆಗಳನ್ನು ದುರಸ್ತಿ ಮಾಡಲಾಗುತ್ತಿದೆ. ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಮಡಿಕೇರಿ ದಸರಾಕ್ಕೆ ಸಬಂಧಿಸಿದಂತೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಚಾರ ನಡೆಸಲಾಗುವುದು. ಸಾಮಾಜಿಕ ಜಾಲತಾಣಗಳನ್ನೂ ಬಳಸಿಕೊಳ್ಳಲಾಗುವುದು. ಸರ್ಕಾರದಿಂದ ಈ ಬಾರಿ ೭೫ ಲಕ್ಷ ರೂ. ಅನುದಾನ ಬಂದಿದ್ದು, ದಶಮಂಟಪ ಮತ್ತು ಕರಗಕ್ಕೆ ಕೊಡುವ ಅನುದಾನದ ಮೊತ್ತ ನಿರ್ಧಾರ ಆಗಿಲ್ಲ ಎಂದರು.
ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಯಶಸ್ವಿ ದಸರಾಕ್ಕೆ ಸಂಕಲ್ಪ ಮಾಡಲಾಗಿದೆ. ಶಾಸಕರ ಸಹಕಾರದಿಂದ ಅದ್ಧೂರಿಯಾಗಿ ದಸರಾ ಆಚರಿಸಲಾಗುವುದು ಎಂದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ಬಿ.ವೈ., ರಾಕೇಶ್ ಇದ್ದರು.