ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ಶ್ರೀ ಕ್ಷೇತ್ರ ಕೈವಾರ ಯೋಗಿನಾರೇಯಣ ಮಠದಲ್ಲಿ ಜು.19ರಿಂದ ಮೂರು ದಿನಗಳವರೆಗೆ ನಡೆಯುವ ಗುರುಪೂಜಾ ಸಂಗೀತೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ದೇಶದ ನಾನಾ ಭಾಗಗಳಿಂದ ಆಗಮಿಸುವ ಸಂಗೀತ ವಿದ್ವಾಂಸರ ಸ್ವಾಗತಕ್ಕೆ ಇಡೀ ಕೈವಾರ ಕ್ಷೇತ್ರ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ.
ಕೈವಾರದ ಶ್ರೀ ಯೋಗಿನಾರೇಯಣ ಯತೀಂದ್ರ ತಾತಯ್ಯನವರು ಕೀರ್ತನೆ ಶತಕಗಳಲ್ಲಿ ಗುರುಗಳ ಮಹತ್ವವನ್ನು ಹಾಡಿ ಹೊಗಳಿದ್ದು, ಈ ಹಿನ್ನೆಲೆಯಲ್ಲಿ ಆಷಾಢ ಮಾಸದ ಹುಣ್ಣಿಮೆ ದಿನ ಗುರುವರ್ಯರನ್ನು ಸ್ಮರಿಸಲಾಗುತ್ತದೆ.
ಗುರುಪರಂಪರೆ ಉಳಿಸಿ, ಆರಾಧಿಸುವ ಜತೆಗೆ ಗುರುಗಳಿಗೆ ಕಲಾರಾಧನೆ ಮೂಲಕ ಭಕ್ತಿ ಸಮರ್ಪಿಸುವ ಗುರುಪೂಜಾ ಸಂಗೀತೋತ್ಸವವನ್ನು ಶ್ರೀಮಠ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ಯೋಗಿ ನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ಮಾತನಾಡಿ, ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದಿರುವ ಸಂಗೀತ ವಿದ್ವಾಂಸರನ್ನು ಮತ್ತು ಸಂಗೀತದ ನಾನಾ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ನೋಡುವ, ಕೇಳುವ ಸೌಭಾಗ್ಯವನ್ನು ಶ್ರೀ ಯೋಗಿ ನಾರೇಯಣ ಮಠವು ಜನರಿಗೆ ಅನುವು ಮಾಡಿ ಕೊಟ್ಟಿದೆ. ಇಂತಹ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಸ್ಥಳಾವಕಾಶ ನೀಡಿ ಅವರ ಪ್ರತಿಭೆಯನ್ನು ಗುರುತಿಸುವ ಕೆಲಸವನ್ನೂ ಶ್ರೀಮಠ ಮಾಡುತ್ತಿದೆ ಎಂದರು.
ವಿಶೇಷ ಅಲಂಕಾರ
ಮಠದ ಆಡಳಿತಾಧಿಕಾರಿ ಕೆ.ಲಕ್ಷ್ಮೀನಾರಾಯಣ್ ಮಾತನಾಡಿ, ಕಾರ್ಯಕ್ರಮ ನಡೆಯುವ ಶ್ರೀ ಯೋಗಿನಾರೇಯಣ ಮಠದ ಸಭಾಂಗಣವನ್ನು ವಿಶೇಷವಾಗಿ ಸಿದ್ಧತೆ ಮಾಡುವ ಕಾರ್ಯ ಮುಂದುವರಿದಿದೆ. ಸಭಾಂಗಣದ ಮುಂದೆಯೂ ವಿಶಾಲವಾದ ಶೆಡ್ ನಿರ್ಮಿಸಲಾಗುವುದು. ಕ್ಷೇತ್ರಕ್ಕೆ ಆಗಮಿಸುತ್ತಿರುವ ಸಂಗೀತ ಕಲಾವಿದರು ಮತ್ತು ಭಕ್ತರಿಗೆ ವಸತಿ, ಊಟದ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿದೆ. ಕೈವಾರ ಕ್ರಾಸ್‌ನಲ್ಲಿ ಬೃಹತ್ ಸ್ವಾಗತ ಕಮಾನು ನಿರ್ಮಿಸಲಾಗಿದ್ದು, ದೇವಾಲಯಕ್ಕೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು. 3 ದಿನಗಳ ಸಂಗೀತ ಉತ್ಸವದಲ್ಲಿ ಕರ್ನಾಟಕವಲ್ಲದೆ, ಆಂಧ್ರ, ತಮಿಳುನಾಡಿನಿಂದಲೂ ಸಹಸ್ರಾರು ಕಲಾ ತಂಡಗಳು, ಭಜನೆಯ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದರು.
ಅನ್ನದಾಸೋಹಕ್ಕೆ 101 ಮೂಟೆ ಅಕ್ಕಿ
ಕೈವಾರದಲ್ಲಿನ ಗುರುಪೂರ್ಣಿಮೆ, ಸಂಗೀತೋತ್ಸವದ ಅನ್ನದಾಸೋಹಕ್ಕಾಗಿ ಚಿಂತಾಮಣಿ ಎಪಿಎಂಸಿ ಮಾಜಿ ನಿರ್ದೇಶಕ ಎಂ.ಎಂ.ಎಸ್.ಶ್ರೀನಿವಾಸ್ ಮತ್ತು ಬಲಿಜ ಸಮುದಾಯದಿಂದ 101 ಮೂಟೆ ಅಕ್ಕಿ ಸಂಗ್ರಹಿಸಿ, ಶ್ರೀಕ್ಷೇತ್ರಕ್ಕೆ ಶನಿವಾರ ಕಳುಹಿಸಿಕೊಡಲಾಯಿತು.
ವರ್ತಕ ಮತ್ತು ಬಲಿಜ ಸಮುದಾಯದ ಮುಖಂಡ ಪಿಟೀಲ್ ದಯಾನಂದ್ ಮಾತನಾಡಿ, ಸಂಗೀತೋತ್ಸವ ವೀಕ್ಷಣೆಗೆ ರಾಜ್ಯವಲ್ಲದೆ ನೆರೆಯ ಆಂಧ್ರ, ತಮಿಳುನಾಡು ಸೇರಿ ನಾನಾ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಗಣ ಆಗಮಿಸುತ್ತದೆ. ಬರುವ ಭಕ್ತರಿಗೆ ಮಠದಿಂದ ಅನ್ನದಾಸೋಹ ಇರಲಿದ್ದು, ಅಕ್ಕಿ ಸಂಗ್ರಹಿಸಿ, ಶ್ರೀಕ್ಷೇತ್ರದ ಅನ್ನದಾಸೋಹಕ್ಕೆ ಪೂರೈಸಲಾಗುತ್ತಿದೆ ಎಂದರು.
ವರ್ತಕರಾದ ಆರ್.ಎಂ.ಜೆ.ಜಯರಾಮಪ್ಪ, ಟೊಮ್ಯಾಟೊ ವ್ಯಾಪಾರಿ ಚಲಪತಿ, ಬ್ಯಾಳು ಸತ್ತಿ, ಗ್ಯಾಸ್ ಮುರಳಿ, ಪಿಟೀಲ್ ರಾಜು, ಸುಮಂತ್, ಸುಪ್ರೀತ್, ಹನುಮಂತ, ನಂಜುಂಡಪ್ಪ, ಕುಂಟಿಗಡ್ಡ ಲಕ್ಷ್ಮಣ್, ವಿ.ಕೆ.ಬಾಬು, ಪಿವಿಸಿ ಶ್ರೀನಾಥ್, ಎಆರ್‌ಕೆ ರವಿ, ದ್ವಾರಕೀನಾಥ್, ಪಿಎಚ್‌ಡಿ ಹರೀಶ್, ಕೋನೇಪಲ್ಲಿ ಲಕ್ಷ್ಮೀನಾರಾಯಣ್, ಟಿ.ಎ.ಬಾಬು, ಬಿ.ಎನ್.ನಾಗರಾಜು, ಪುಂಗನೂರು ರಾಜು, ಹರಿ, ರವಿ, ಪ್ರದೀಪ್ ನಾಯ್ಡು ಇತರರು ಇದ್ದರು.