ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷರಾಗಿ ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ಪದಗ್ರಹಣ ಕಾರ್ಯ ಕ್ರಮಕ್ಕೆ ಭರದ ತಯಾರಿ ನಡೆದಿದೆ.
ಸಮಾರಂಭ ಹೇಗಿರಬೇಕೆಂಬ ಬಗ್ಗೆ ಸ್ವತಃ ಡಿ.ಕೆ. ಶಿವಕುಮಾರ್ ಕಲ್ಪನೆ ಕಟ್ಟಿಕೊಂಡು ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಲಾಕ್ಡೌನ್ ಸಡಿಲಿಕೆ ವಿಚಾರದಲ್ಲಿ ಸೋಮವಾರ ಸರ್ಕಾರದ ತೀರ್ಮಾನ ನೋಡಿಕೊಂಡು ಪದಗ್ರಹಣ ದಿನಾಂಕ ಘೋಷಿಸಲು ಡಿಕೆಶಿ ನಿರ್ಧರಿಸಿದ್ದು, ಸದ್ಯಕ್ಕೆ ಜೂ.7ಕ್ಕೆ ಕಾರ್ಯಕ್ರಮ ನಡೆಸಲು ಉದ್ದೇಶಿಸಿದ್ದಾರೆ. ಕೆಪಿಸಿಸಿ ಕಚೇರಿ ಮುಂದೆ ನಡೆಯುವ ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲ ಶಾಸಕರು, ಪರಿಷತ್ ಸದಸ್ಯರು, ಹಿರಿಯ ನಾಯಕರು ಸೇರಿ 150 ಮಂದಿ ಮಾತ್ರ ಹಾಜರಿರುವರು. ಉಳಿದವರೆಲ್ಲರೂ ಜಿಲ್ಲಾ-ತಾಲೂಕು ಕೇಂದ್ರ, ಗ್ರಾಮ ಪಂಚಾಯಿತಿಯಲ್ಲೇ ಇದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡವರೆಲ್ಲ ಪಕ್ಷದ ಸಿದ್ಧಾಂತ ಒಪ್ಪಿ ಕೆಲಸ ಮಾಡುವುದಾಗಿ ಪ್ರಮಾಣ ಸ್ವೀಕರಿಸಿ, ಸಂವಿಧಾನದ ಮುನ್ನುಡಿ ಓದಲಿದ್ದಾರೆ. ದೆಹಲಿ ನಾಯಕರಿಗೂ ಆಹ್ವಾನ ನೀಡುತ್ತಿದ್ದು, ಅವರ ಪಾಲ್ಗೊಳ್ಳುವಿಕೆ ಸಮಾರಂಭದ ತೂಕ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿವೆ ಎನ್ನಲಾಗಿದೆ.
ಜೂಮ್ ಆಪ್ನಲ್ಲಿ ಲೈವ್ ಮಾಡಿ, ರಾಜ್ಯಾದ್ಯಂತ ಬರೋಬ್ಬರಿ 8 ಸಾವಿರ ಸ್ಥಳಗಳಲ್ಲಿ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. 37 ಜಿಲ್ಲಾ ಘಟಕಗಳಲ್ಲಿ ಇರುವವರನ್ನು ಕೆಪಿಸಿಸಿ ಕಚೇರಿಯಲ್ಲಿದ್ದವರೂ ವೀಕ್ಷಿಸುವಂತೆ ಎಲ್ಇಡಿ ಪರದೆ ಅಳವಡಿಸಲಾಗುತ್ತದೆ. | ಸಲೀಂ ಅಹ್ಮದ್ ಕೆಪಿಸಿಸಿ ಕಾರ್ಯಾಧ್ಯಕ್ಷ