ಬೆಂಗಳೂರು ವಿಮಾನ ನಿಲ್ದಾಣಕ್ಕೆ ಎಂಆರ್‌ಪಿಎಲ್‌ನಿಂದ ಪ್ರತ್ಯೇಕ ಇಂಧನ ಪೈಪ್‌ಲೈನ್‌ಗೆ ಪಿಎನ್‌ಜಿಆರ್‌ಬಿ ಅನುಮೋದನೆ ಪತ್ರ ವಿತರಿಸಿತು. ಬಿ.ಎಚ್.ವಿ. ಪ್ರಸಾದ್ ಮೊದಲಾದವರಿದ್ದರು.
ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಸಂಸ್ಥೆಯು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ವಿಮಾನ ಇಂಧನ ಪೈಪ್‌ಲೈನ್ ನಿರ್ಮಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (ಪಿಎನ್‌ಜಿಆರ್‌ಬಿ)ಯಿಂದ ಅಧಿಕೃತ ಅನುಮೋದನೆ ಲಭಿಸಿದೆ.
ದೇವನಗೊಂತಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣದವರೆಗೆ ನಿರ್ಮಾಣವಾಗಲಿರುವ ಈ ಪೈಪ್‌ಲೈನ್ ಯೋಜನೆಯು ವಾರ್ಷಿಕ 2.5 ಮಿಲಿಯನ್ ಮೆಟ್ರಿಕ್ ಟನ್ ಇಂಧನ ಸಾಗಿಸುವ ಸಾಮರ್ಥ್ಯ ಹೊಂದಿರಲಿದ್ದು, ಮುಂದಿನ 36 ತಿಂಗಳೊಳಗೆ (3 ವರ್ಷ) ಪೂರ್ಣಗೊಳ್ಳುವ ಗುರಿ ಹೊಂದಿದೆ.
ಯೋಜನೆಯ ಮಾರ್ಗ: ಬೆಂಗಳೂರಿನ ದೇವನಗೊಂತಿ ಮಾರ್ಕೆಟಿಂಗ್ ಟರ್ಮಿನಲ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣದ ಒಳಗಿರುವ ಹಾಲಿ ಇಂಧನ ಫಾರ್ಮ್ ಹಾಗೂ ಮುಂಬರುವ ಉಪಗ್ರಹ ಇಂಧನ ಫಾರ್ಮ್ ಸ್ಟೇಷನ್‌ಗಳಿಗೆ ಈ ಪೈಪ್‌ಲೈನ್ ಸಂಪರ್ಕ ಕಲ್ಪಿಸಲಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಇಂಧನ ಹರಿವು: ಸದ್ಯ ಎಂಆರ್‌ಪಿಎಲ್‌ನ ಮಂಗಳೂರು ಘಟಕದಲ್ಲಿ ಉತ್ಪಾದನೆಯಾಗುವ ಪೆಟ್ರೋಲಿಯಂ ಉತ್ಪನ್ನಗಳು ಈಗಾಗಲೇ ಚಾಲ್ತಿಯಲ್ಲಿರುವ ಪಿಎಂಎಚ್‌ಬಿಎಲ್ ಪೈಪ್‌ಲೈನ್ ಮೂಲಕ ಬೆಂಗಳೂರಿನ ದೇವನಗೊಂತಿ ಟರ್ಮಿನಲ್ ತಲುಪುತ್ತಿವೆ. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಹೊಸ ಪೈಪ್‌ಲೈನ್ ನೇರ ಸಂಪರ್ಕ ಒದಗಿಸಲಿದೆ.
ವಾಯುಯಾನ ವಲಯಕ್ಕೆ ಬೂಸ್ಟ್: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಹಾಗೂ ಸರಕು ಸಾಗಣೆ (ಕಾರ್ಗೋ) ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿರುವುದರಿಂದ, ವಿಮಾನ ಇಂಧನದ ಬೇಡಿಕೆಯೂ ತೀವ್ರಗೊಂಡಿದೆ. ಈ ಪೈಪ್‌ಲೈನ್ ಇಂಧನ ಪೂರೈಕೆಯನ್ನು ಇನ್ನಷ್ಟು ಸುಗಮ ಮತ್ತು ನಂಬಿಕಸ್ಥವಾಗಿಸಲಿದೆ.
ಈ ಪ್ರಸ್ತಾವಿತ ಎಟಿಎಫ್ ಪೈಪ್‌ಲೈನ್ ಎಂಆರ್‌ಪಿಎಲ್ ಸಂಸ್ಥೆಗೆ ಅತ್ಯಂತ ಮಹತ್ವದ ಮೈಲಿಗಲ್ಲಾಗಲಿದೆ. ಇದು ಬೆಂಗಳೂರು ವಿಮಾನ ನಿಲ್ದಾಣದ ಹೆಚ್ಚುತ್ತಿರುವ ಇಂಧನ ಅಗತ್ಯವನ್ನು ಪೂರೈಸುವುದಲ್ಲದೆ, ದೇಶದ ಪ್ರಮುಖ ಆರ್ಥಿಕ ಹಬ್‌ಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ಎಂಆರ್‌ಪಿಎಲ್ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಗಟ್ಟಿಯಾದ ಹೆಜ್ಜೆಯಾಗಲಿದೆ. ಒಟ್ಟಾರೆಯಾಗಿ, ಈ ಯೋಜನೆಯಿಂದಾಗಿ ರಸ್ತೆ ಮೂಲಕ ಟ್ಯಾಂಕರ್‌ಗಳಲ್ಲಿ ಇಂಧನ ಸಾಗಿಸುವುದು ತಪ್ಪಲಿದ್ದು, ಪರಿಸರ ಸ್ನೇಹಿ ಹಾಗೂ ಅತ್ಯಂತ ಸುರಕ್ಷಿತವಾಗಿ ವಿಮಾನ ನಿಲ್ದಾಣಕ್ಕೆ ಇಂಧನ ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂದು ಎಂಆರ್‌ಪಿಎಲ್ ಕಾರ್ಯನಿರ್ವಾಹಕ ನಿರ್ದೇಶಕ (ಪ್ರಾಜೆಕ್ಟ್) ಬಿ.ಎಚ್.ವಿ. ಪ್ರಸಾದ್ ತಿಳಿಸಿದ್ದಾರೆ.