ಹುಬ್ಬಳ್ಳಿ: ಆಹಾರ ಉದ್ಯಮದಲ್ಲಿ ತೊಡಗಿದವರಿಗೆ ಆಹಾರ ಸುರಕ್ಷತೆ ಹಾಗೂ ತರಬೇತಿ ನೀಡಿ ಪ್ರಮಾಣ ಪತ್ರ ಕೊಡುವ ಕಾರ್ಯಕ್ರಮ ಅಕ್ಟೋಬರ್ 6ರಂದು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಗ್ಲೋಬಲ್ ಇನ್‌ಸ್ಟಿಟ್ಯೂಟ್ ಫಾರ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್ ಫೌಂಡೇಷನ್ ಜಿಲ್ಲಾ ಮುಖ್ಯಸ್ಥ ಸೋಮಲಿಂಗಪ್ಪ ಸಂಗೊಳ್ಳಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ರಿಂದ ಒಂದು ತಂಡ ಹಾಗೂ ಮಧ್ಯಾಹ್ನ 3ಕ್ಕೆ ಮತ್ತೊಂದು ತಂಡ ಹೀಗೆ ಎರಡು ಬ್ಯಾಚ್ ಗಳಲ್ಲಿ ನೂರು ಜನರಿಗೆ ತರಬೇತಿ ಪ್ರಮಾಣ ಪತ್ರ ನೀಡಲಾಗುವುದು ಎಂದರು.
ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಆಹಾರ ಉದ್ಯಮಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದೊಂದಿಗೆ ಮೇಲ್ವಿಚಾರಕರ ತರಬೇತಿ ನೀಡಲು ಗ್ಲೋಬಲ್ ಇನ್‌ಸ್ಟಿಟ್ಯೂಟ್ ಒಡಂಬಡಿಕೆ ಮಾಡಿಕೊಂಡಿದೆ.
ಮಹಾನಗರ ಪಾಲಿಕೆ, ಜಿಲ್ಲೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಕಿತಾಧಿಕಾರಿಗಳು ಮತ್ತು ಆಹಾರ ಸುರಕ್ಷತಾಧಿಕಾರಿಗಳ ಸಹಯೋಗದೊಂದಿಗೆ ಮತ್ತು ಸೆಂಟ್ರಲ್ ಎಫ್ಎಸ್ಎಸ್ಎಐ ಅವರ ನಿರ್ದೇಶನದಂತೆ ತರಬೇತಿ ಶುಲ್ಕ ಪಡೆದು ತರಬೇತಿ ನೀಡಬಹುದಾಗಿದೆ.
ಕೇಂದ್ರ ಸರ್ಕಾರದ ಆಹಾರ ಸುರಕ್ಷತಾ ಕಾಯ್ದೆ ಜಾರಿಯಲ್ಲಿರುವುದರಿಂದ ಪ್ರತಿಯೊಬ್ಬ ಆಹಾರ ಉದ್ಯಮದಾರರು ತರಬೇತಿ ಪಡೆಯುವುದು, ಫುಡ್ ಸೇಟಿ ಸೂಪರ್ವೈಸರ್ ನೇಮಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಅವರು ತಿಳಿಸಿದರು.
ಆಹಾರ ಮಾರಾಟ ಮಾಡುವವರು, ದಾನ ನೀಡುವವರು, ಧಾಮಿರ್ಕ ಕೇಂದ್ರಗಳು, ಹೋಟೆಲ್ನವರು, ಕೇಟರಿಂಗ್ ಮಾಡುವವರು, ಆಹಾರ ಉತ್ಪಾದನೆ ಮಾಡುವವರು ಹೀಗೆ ವಿವಿಧ ಕೆಲಸಗಳಲ್ಲಿ ನಿರತರು ಪ್ರಮಾಣ ಪತ್ರ ಪಡೆದುಕೊಳ್ಳಬೇಕೆಂಬ ನಿಯಮವಿದೆ ಎಂದರು.
ಸಂಸ್ಥೆಯ ಜಿಲ್ಲಾ ಸಂಯೋಜಕಿ ಭಾರತಿ ಸಂಗೊಳ್ಳಿ ಇತರರು ಇದ್ದರು.