ಹುಬ್ಬಳ್ಳಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಮಹಾನಗರ ಪಾಲಿಕೆ, ಮೀನುಗಾರಿಕೆ ಇಲಾಖೆ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಹಾಪ್ಕಾಮ್ಸ್ ಮತ್ತು ಉದ್ಯಾನ ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿಯ ಇಂದಿರಾ ಗಾಜಿನ ಮನೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಧಾರವಾಡ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಜನಮನ ಸೆಳೆಯಿತು.
ತರಹೇವಾರಿ ಹೂ, ಹಣ್ಣುಗಳು, ಕಾಯಿ, ಸಸಿ, ಗಿಡಗಳನ್ನು ನೋಡಿದ ಜನರು ಸಂಭ್ರಮಪಟ್ಟರು. ಹೂವಿನಲ್ಲಿ ಚಿತ್ರಿಸಲಾಗಿದ್ದ ಕರ್ನಾಟಕ ನೆ, ಕಾಫಿ ಕಪ್ಗಳು, ಗುಲಾಬಿ ಹೂವು ಅಂಬಾರಿ ಆನೆಯ ಕಲಾಕೃತಿಗಳ ಮುಂದೆ ಜನರು ಸೆಲ್ಫಿಗೆ ಮುಗಿ ಬಿದ್ದಿದ್ದರು.
ಶ್ಯಾವಿಗೆಯಲ್ಲಿ ಮೂಡಿದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಸಿರಿಧಾನ್ಯಗಳಲ್ಲಿ ಮೂಡಿದ ಮಹಾತ್ಮ ಬಸವೇಶ್ವರರ ಕಲಾಕೃತಿಗಳು ಆಕರ್ಷಣೀಯವಾಗಿವೆ.
ಸಿರಿಧಾನ್ಯ ಹಬ್ಬವೂ ಇಲ್ಲಿದ್ದು, ಜೋಳ, ರಾಗಿ, ನವಣೆ, ಸಜ್ಜೆ, ಊದಲು, ಬರಗು ಇತ್ಯಾದಿ ಧಾನ್ಯಗಳನ್ನು ನೋಡಬಹುದು.
ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ಶಾಸಕ ಮಹೇಶ ಟೆಂಗಿನಕಾಯಿ, ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.