ರಂಜಾನ್ ಹಬ್ಬಕ್ಕೆ ಹಣ್ಣಿಗೆ ಹೆಚ್ಚಿದ ಬೇಡಿಕೆ 
ಜಿಲ್ಲೆ

ರಂಜಾನ್ ಹಬ್ಬಕ್ಕೆ ಹಣ್ಣಿಗೆ ಹೆಚ್ಚಿದ ಬೇಡಿಕೆ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
ರಂಜಾನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಣ್ಣುಗಳಿಗೆ ಡಿಮಾಂಡ್ ಕಂಡುಬರುತ್ತಿದೆ.
ಮಾರುಕಟ್ಟೆಗಳಲ್ಲಿ ತರಹೇವಾರಿ ಹಣ್ಣುಗಳ ರಾಶಿ ಕಂಡುಬರುತ್ತಿದ್ದು, ದರ ಏರಿಕೆ ನಡುವೆಯೂ ಭರ್ಜರಿ ವ್ಯಾಪಾರ ನಡೆಯುತ್ತಿದೆ. ರಂಜಾನ್ ಪ್ರಯುಕ್ತ ಒಂದು ತಿಂಗಳ ಉಪವಾಸ ವ್ರತ ಆಚರಿಸುವ ಮುಸ್ಲಿಮರು, ಹಣ್ಣುಗಳ ಸೇವನೆ ಹೆಚ್ಚು ಮಾಡುವುದರಿಂದ ಎಲ್ಲ ಕಡೆಯಲ್ಲಿಯೂ ಹಣ್ಣುಗಳಿಗೆ ಬೇಡಿಕೆ ಕಂಡುಬರುತ್ತಿದೆ. ರಣ ಬಿಸಿಲು ಇರುವುದರಿಂದ ಕಲ್ಲಂಗಡಿ, ಕರ್ಬೂಜಾದಂಥ ಹಣ್ಣುಗಳು ಹೆಚ್ಚು ಬಿಕರಿಯಾಗುತ್ತಿವೆ. ಇದರ ಜತೆಗೆ ಹಣ್ಣುಗಳ ತಂಪುಪಾನೀಯಗಳಿಗೂ ಡಿಮಾಂಡ್ ಸೃಷ್ಟಿಯಾಗಿದ್ದು, ವಿವಿಧ ಪಾನೀಯ ಮಳಿಗೆಗಳಲ್ಲಿ ಗ್ರಾಹಕರ ದಂಡು ಕಂಡುಬರುತ್ತಿದೆ.

ಉಪವಾಸ ಬಿಡುವ ವೇಳೆ ಸೇವನೆ
ತಿಂಗಳ ಕಾಲ ಸೂರ್ಯೊದಯಕ್ಕೂ ಮೊದಲೆ ಉಪಹಾರ ಸೇವನೆ ಮಾಡುವ ಸಮುದಾಯದವರು ಸಂಜೆಯವರೆಗೆ ನೀರೂ ಕುಡಿಯದೆ ಉಪವಾಸ ಆಚರಣೆ ಮಾಡುತ್ತಾರೆ. ಸಂಜೆ ಬಳಿಕ ಹಣ್ಣು ತಿನ್ನುವುದರ ಮೂಲಕ ಹಾಗೂ ಪಾನೀಯ ಸೇವನೆ ಮೂಲಕ ಉಪವಾಸ ಕೈಬಿಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಂಜಾನ್ ವೇಳೆ ಹಣ್ಣುಗಳಿಗೆ ಹೆಚ್ಚು ಬೇಡಿಕೆ ಕಂಡುಬರುತ್ತದೆ. ಇದು ಇತರ ಗ್ರಾಹಕರ ಜೇಬಿಗೂ ಕತ್ತರಿ ಬಿದ್ದರೆ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಗುತ್ತದೆ.


ಹಣ್ಣುಗಳ ದರ
ಸೇಬು ಕೆ.ಜಿಗೆ 220 ರಿಂದ260, ಸಪೋಟ 100ರೂ, ಕಿತ್ತಳೆ 250ರೂ., ಪಚ್ಚಬಾಳೆ ಹಣ್ಣು 40ರೂ, ಏಲಕ್ಕಿ ಬಾಳೆಹಣ್ಣು 70ರೂ. ದ್ರಾಕ್ಷಿ 100ರೂ., ಮೋಸಂಬಿ 100ರೂ., ದಾಳಿಂಬೆ 220ರೂ., ಮಾವಿನಹಣ್ಣು 220ರೂ., ಕರ್ಬೂಜಾ30ರೂ., ಕಲ್ಲಂಗಡಿಹಣ್ಣು 40ರೂ. ಪಪ್ಪಾಯಿ 40ರೂ., ಅನಾನಸ್ 90ರೂ., ಕರ್ಜೂರ 250 ರಿಂದ 300 ರೂವರೆಗೆ ಮಾರಾಟವಾಗುತ್ತದೆ.