hannu 
ಜಿಲ್ಲೆ

ಹಣ್ಣುಗಳ ಮೇಳದಿಂದ ರೈತರಿಗೆ ಉತ್ತೇಜನ

ಬ್ರಹ್ಮಾವರ: ರೈತರು ಗ್ರಾಹಕರು ಮತ್ತು ಸಣ್ಣ ಉದ್ದಿಮೆದಾರರಿಗೆ ಉತ್ತೇಜನ ನೀಡುತ್ತಿದೆ ಹಲಸಿನ ಮತ್ತು ಹಣ್ಣು ಮೇಳ ಜಾತ್ರೆಗೆ ಸಮಾನವಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವಾನಂದ್ ಹೇಳಿದರು.

ಶುಕ್ರವಾರ ಬ್ರಹ್ಮಾವರ ಎಸ್‌ಎಂಎಸ್ ಸಮುದಾಯ ಭವನದಲ್ಲಿ ರೋಟರಿ ಕ್ಲಬ್ ಬ್ರಹ್ಮಾವರ, ರೋಟರಿ ಕ್ಲಬ್ ಬಾರ್ಕೂರು, ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಡಿಪ್ಲೋಮಾ ಕೃಷಿ ಮಹಾ ವಿದ್ಯಾಲಯ ಬ್ರಹ್ಮಾವರ ಸಹಯೋಗದಲ್ಲಿ 3 ದಿನಗಳ ಕಾಲ ನಡೆಯುವ ಹಲಸು ಮತ್ತು ಹಣ್ಣು ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿ ಸಾಧಕರಾದ ಸದಾಶಿವ ಪೂಜಾರಿ ಪಾಂಡೇಶ್ವರ ಮತ್ತು ಜಯಶ್ರೀ ಅವರನ್ನು ಸನ್ಮಾನಿಸಲಾಯಿತು. ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ರೋಟರಿ ಬಿ.ಎಂ.ಭಟ್, ಡಾ.ಎ.ಬಿ.ಪಾಟೀಲ, ಭುವನೇಶ್ವರಿ, ಎಂ.ಸಿ.ಮಥಾಯ, ಡಾ.ಸುಧೀರ ಕಾಮತ್, ಡಾ.ಭೂಮಿಕಾ ಎಚ್.ಆರ್.ಎಂ.ರಾಘವೇಂದ್ರ ಸಾಮಗ, ರಾಜಾರಾಮ್ ಶೆಟ್ಟಿ, ಗಣೇಶ್ ಶೆಟ್ಟಿ, ದಿನೇಶ್ ನಾಯರಿ, ಉದಯ ಪೂಜಾರಿ ಉಪಸ್ಥಿತರಿದ್ದರು. ಬ್ರಹ್ಮಾವರ ರೋಟರಿ ಅಧ್ಯಕ್ಷ ಆರೂರು ಶ್ರೀಧರ ವಿ.ಶೆಟ್ಟಿಸ್ವಾಗತಿಸಿ, ಅಲ್ವನ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ನೂರಕ್ಕೂ ಅಧಿಕ ಸ್ಟಾಲ್

ಮೂರು ವಿಭಾಗದಲ್ಲಿ ನಡೆಯುತ್ತಿರುವ ಹಣ್ಣು ಮೇಳದಲ್ಲಿ ನೂರಕ್ಕೂ ಅಧಿಕ ಸ್ಟಾಲ್‌ಗಳಲ್ಲಿ ರಾಮನಗರದ ಮಾವಿನ ಹಣ್ಣುಗಳು ಮತ್ತು ಹಲಸಿನ ಜಿಲೇಬಿ, ಹೋಳಿಗೆ, ಹಣ್ಣಿನ ಐಸ್‌ಕ್ರೀಂ, ಆಯುರ್ವೇದ ಉತ್ಪನ್ನಗಳ ಸ್ಟಾಲ್, ಹಲಸಿನ ಗಿಡಗಳ ನರ್ಸರಿ, ಕೆಂಪು ಹಲಸು ಹಣ್ಣಿನ ಉತ್ಪನ್ನಗಳು, ಹಣ್ಣಿನ ಖಾದ್ಯಗಳು, ತರಕಾರಿ ಬೀಜಗಳು ಮತ್ತು ನಾನಾ ಗೃಹೋಪಯೋಗಿ ವಸ್ತುಗಳ ಮಳಿಗೆಗಳು ಇದ್ದು ಹಬ್ಬದ ವಾತಾವರಣ ಕಂಡುಬಂದಿದೆ.