ಜಿಲ್ಲೆ

ಟೌನ್​ಹಾಲ್ ಮುಂದೆ ಪ್ರತಿಭಟನೆ ಬಂದ್

kumarvrl

ಬೆಂಗಳೂರು: ರಾಜಧಾನಿಯಲ್ಲಿ ಪ್ರತಿಭಟನೆಗೆ ಸೂಕ್ತ ಸ್ಥಳ ಎನಿಸಿದ್ದ ‘ಟೌನ್ ಹಾಲ್ ಮುಂಭಾಗ’ ಇನ್ಮುಂದೆ ಯಾವುದೇ ಪ್ರತಿಭಟನೆ, ಧರಣಿ ಮಾಡುವಂತಿಲ್ಲ. ಇಲ್ಲಿ ಪ್ರತಿಭಟನೆ, ಧರಣಿಯನ್ನು ನಿರ್ಬಂಧಿಸುವ ನಿರ್ಣಯವನ್ನು ಶನಿವಾರದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಅನುಮೋದಿಸಲಾಗಿದೆ. ಟೌನ್​ಹಾಲ್ ಮುಂಭಾಗದ ಬದಲು ಸ್ವಾತಂತ್ರ್ಯ ಉದ್ಯಾನದಲ್ಲೇ ಪ್ರತಿಭಟನೆ, ಧರಣಿಗಳನ್ನು ಮಾಡುವಂತೆ ಸೂಚಿಸಿದೆ.

ಸಾರ್ವಜನಿಕರು, ರೈತರು, ಮಹಿಳೆಯರು, ಕಾರ್ವಿುಕರು, ಕಲಾವಿದರು, ಅಂಗವಿಕಲರ ಸಂಘ -ಸಂಸ್ಥೆಗಳು ಹಾಗೂ ವಿವಿಧ ನಾಗರಿಕ ಗುಂಪುಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿನ ನಿರ್ಣಯಗಳನ್ನು ಖಂಡಿಸಲು, ತಮ್ಮ ಸಮಸ್ಯೆಗಳನ್ನು ಸರ್ಕಾರಗಳ ಗಮನಕ್ಕೆ ತರಲು ನಗರದ ಹೃದಯಭಾಗದಲ್ಲಿರುವ ಟೌನ್​ಹಾಲ್ ಎದುರು ಪ್ರತಿಭಟನೆ ಮಾಡುವುದನ್ನು ರೂಢಿಸಿಕೊಂಡಿದ್ದವು. ಆದರೆ, ಪ್ರತಿಭಟನೆಗಳಿಂದ ಈ ಭಾಗದಲ್ಲಿ ವಾಹನಸಂಚಾರ ಸಮಸ್ಯೆ ಸೇರಿ ಹಲವು ಸಮಸ್ಯೆಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಪುರಭವನ ಮುಂಭಾಗ ಪ್ರತಿಭಟನೆ, ಧರಣಿಗಳಿಗೆ ಅವಕಾಶ ನೀಡದಿರಲು ಪಾಲಿಕೆ ನಿರ್ಧರಿಸಿದೆ.

ತನ್ನ ಈ ನಿರ್ಧಾರವನ್ನು ತಕ್ಷಣವೇ ಪೊಲೀಸ್ ಇಲಾಖೆಯ ಗಮನಕ್ಕೆ ತಂದು, ಇಲ್ಲಿ ಪ್ರತಿಭಟನೆಗೆ ಅನುಮತಿ ನೀಡದಂತೆ ಸೂಚಿಸಲು ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ಅವರಿಗೆ ಸೂಚಿಸಲಾಯಿತು.

ಪಾಲಿಕೆ ಆದಾಯಕ್ಕೂ ಖೋತಾ: ನಗರದ ಹೃದಯಭಾಗದಲ್ಲಿರುವ ಕಾರಣ ಜನರು ಟೌನ್​ಹಾಲ್​ನಲ್ಲಿ ಸಭೆ ಸಮಾರಂಭ ನಡೆಸುತ್ತವೆ. ಇದಕ್ಕಾಗಿ ದಿನಕ್ಕೆ 80 ಸಾವಿರ ರೂ. ಪಾವತಿಸಿ ಟೌನ್​ಹಾಲ್ ಅನ್ನು ಮುಂಗಡವಾಗಿ ಕಾಯ್ದಿರಿಸಿರುತ್ತವೆ. ಆದರೆ, ಸಂಘ-ಸಂಸ್ಥೆಗಳು ಟೌನ್​ಹಾಲ್ ಎದುರು ಏಕಾಏಕಿ ಪ್ರತಿಭಟನೆ ಮಾಡುವುದರಿಂದ ಸಂಘಸಂಸ್ಥೆಗಳ ಕಾರ್ಯಕ್ರಮಗಳ ಆಯೋಜನೆಗೆ ಅಡ್ಡಿ ಉಂಟಾಗುತ್ತದೆ. ಹಾಗಾಗಿ ಟೌನ್​ಹಾಲ್​ನಲ್ಲಿ ಕಾರ್ಯಕ್ರಮ ಆಯೋಜಿಸುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಅದರ ಆದಾಯವೂ ಕಡಿಮೆಯಾಗುತ್ತಿದೆ. ಪಾಲಿಕೆಗೆ ಆದಾಯ ಕಡಿಮೆಯಾಗುತ್ತಿದೆ. ಟೌನ್​ಹಾಲ್ ಎದುರು ಪ್ರತಿಭಟನೆ ನಿರ್ಬಂಧಕ್ಕೆ ಇದು ಕೂಡ ಪ್ರಮುಖ ಕಾರಣವಾಗಿದೆ.

ವಾಹನದಟ್ಟಣೆ ಸಮಸ್ಯೆಯೂ ಹೆಚ್ಚು: ಟೌನ್​ಹಾಲ್ ಮುಂಭಾಗದಲ್ಲಿ ಯಾವುದಾದರೂ ಸಂಘಟನೆಗಳು ಪ್ರತಿಭಟನೆ ನಡೆಸಿದಾಗ ಆ ಭಾಗದಲ್ಲಿ ವಾಹನದಟ್ಟಣೆ ಉಂಟಾಗುತ್ತದೆ. ನಗರದ ಪ್ರಮುಖ ವೃತ್ತಗಳಾದ ನರಸಿಂಹರಾಜ ವೃತ್ತ (ಎನ್.ಆರ್.ವೃತ್ತ), ರಿಚ್ಮಂಡ್ ವೃತ್ತ, ಕೆಆರ್ ಮಾರ್ಕೆಟ್ ರಸ್ತೆ, ರಾಜಭವನ ರಸ್ತೆ, ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಸೇರಿ ಎಲ್ಲೆಡೆ ಅಂದಾಜು 2ರಿಂದ 3 ಕಿ.ಮೀ. ವಾಹನದಟ್ಟಣೆ ಉಂಟಾಗುತ್ತಿದೆ. ಇದರಿಂದ 1 ಗಂಟೆಗೂ ಹೆಚ್ಚುಕಾಲ ವಾಹನಸವಾರರು ನಿಂತಲ್ಲೇ ನಿಲ್ಲುವ ಪರಿಸ್ಥಿತಿ ಉಂಟಾಗುತ್ತಿತ್ತು. ಈ ಸಮಸ್ಯೆ ಪರಿಹರಿಸಲು ಪೊಲೀಸರು ಹರಸಾಹಸ ಮಾಡುವುದು ಅನಿವಾರ್ಯವಾಗಿತ್ತು.

ಪ್ರತಿಪಕ್ಷಗಳಿಂದ ಆಕ್ಷೇಪ

ಟೌನ್​ಹಾಲ್ ಮುಂದೆ ಪ್ರತಿಭಟನೆ, ಧರಣಿ ನಿರ್ಬಂಧಿಸುವ ನಿರ್ಣಯ ಕೌನ್ಸಿಲ್ ಸಭೆಯಲ್ಲಿ ಮಂಡನೆಯಾಗುತ್ತಲೇ ಪ್ರತಿಪಕ್ಷಗಳ ಸದಸ್ಯರು ಮೇಯರ್ ಪೀಠದ ಮುಂಭಾಗದಲ್ಲಿ ಪ್ರತಿಭಟನೆ ಆರಂಭಿಸಿದರು. ಪ್ರತಿಪಕ್ಷ ನಾಯಕ ಅಬ್ದುಲ್ ವಾಜೀದ್, ದೇಶದಲ್ಲಿ ಎನ್​ಆರ್​ಸಿ ಮತ್ತು ಸಿಎಎ ಪ್ರತಿಭಟನೆಗಳು ನಡೆಯುತ್ತಿವೆ. ನಗರದಲ್ಲಿ ಈ ಪ್ರತಿಭಟನೆಗಳನ್ನು ಹತ್ತಿಕ್ಕಲು ಟೌನ್​ಹಾಲ್ ಮುಂದೆ ಪ್ರತಿಭಟನೆಗಳನ್ನು ನಿರ್ಬಂಧಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನಿರ್ಬಂಧಿಸುವ ಕ್ರಮವನ್ನು ಖಂಡಿಸುತ್ತೇವೆ. ಇದರಿಂದ ಹೋರಾಟ ಹಾಗೂ ಸಂಘಟನೆಗಳ ಬಲ ಕುಗ್ಗಿಸಲು ಯತ್ನಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಗೆ ಲಭ್ಯ ಸ್ಥಳಗಳು

ಸ್ವಾತಂತ್ರ್ಯ ಉದ್ಯಾನ

ಆರ್. ಸುಬ್ಬಣ್ಣ ವೃತ್ತ

ಬನ್ನಪ್ಪ ಪಾರ್ಕ್

ಮೈಸೂರು ಬ್ಯಾಂಕ್ ವೃತ್ತ