ಸಿಂಧನೂರು: ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಸಂಘಗಳು ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ನಗರದ ಕನಕದಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸೌರ್ಹಾದ ಸಂಯುಕ್ತ ಸಹಕಾರಿ ನಿ., ರಾಯಚೂರು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ಹಾಗೂ ತಾಲೂಕಿನ ಸೌರ್ಹಾದ ಸಹಕಾರಿಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸಹಕಾರ ಮತ್ತು ಯುವಕರು ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರ ಕಷ್ಟ ಕಾಲದಲ್ಲಿ ನೆರವು ನೀಡಿ, ಆರ್ಥಿಕ ಅಭಿವೃದ್ಧಿಗೆ ಸಹಕಾರ ಸಿಗಲಿದೆ ಎಂಬ ಉದ್ದೇಶದಿಂದ ಸಹಕಾರಿ ಆರಂಭಿಸಲಾಗಿದೆ.
ಸಹಕಾರಿಗಳಿಂದ ಅನೇಕ ತರಹದ ವ್ಯವಹಾರ ವೃದ್ಧಿಯಾಗಿದೆ. ನವಾಬರ ಕಾಲದಲ್ಲಿ ಸಹಕಾರಿ ಸಂಘ ಆರಂಭಿಸಲಾಯಿತು. ಅಂದು ರೈತರು ಬೆಳೆಯುತ್ತಿದ್ದ ಜೋಳವನ್ನು ಸೊಸೈಟಿಗಳಿಗೆ ಹಾಕಲಾಗುತ್ತಿತ್ತು. ಇಲ್ಲಿ ರೈತರ-ಸೊಸೈಟಿ ನಡುವೆ ವ್ಯವಹಾರ ನಡೆಯುತ್ತಿತ್ತು. ಸಹಕಾರಿ ಸಂಘದಿಂದ ಎಲ್ಲರಿಗೂ ಲಾಭವಾಗಬೇಕು ಎನ್ನುವ ಧ್ಯೇಯ ಹೊಂದಲಾಗಿದೆ. ಸಹಕಾರಿ ಕ್ಷೇತ್ರದ ಬೆಳವಣಿಗೆ, ಅಭಿವೃದ್ಧಿ ಬಗ್ಗೆ ಯುವಕರು ತಿಳಿದುಕೊಳ್ಳಬೇಕು ಎಂದರು.
ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಮಾಜಿ ನಿರ್ದೇಶಕ ಬಿ.ರಾಜಶೇಖರ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಸಹಕಾರಿ ರಂಗದ ಪಾತ್ರ ಮಹತ್ವದ್ದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಮೂಲಕ ಕೋಟ್ಯಂತರ ರೂ. ಷೇರು, ಸಬ್ಸಿಡಿ, ಸಹಾಯಧನ ನೀಡುತ್ತಿವೆ. ಗ್ರಾಮ ಪಂಚಾಯಿತಿ, ಶಾಲೆ, ಸಹಕಾರ ಸಂಘ ಸಮುದಾಯ ಅಭಿವೃದ್ಧಿಯ ಮೂರು ಆಧಾರ ಸ್ತಂಭಗಳಾಗಿವೆ ಎಂದರು. ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ದೊಡ್ಡಬಸವರಾಜ, ನಗರಸಭೆ ಹಂಗಾಮಿ ಅಧ್ಯಕ್ಷೆ ಮಂಜುಳಾ ಪ್ರಭುರಾಜ ಮಾತನಾಡಿದರು. ಸಹಕಾರಿಯ ಪದ್ಮನಾಯ್ಡು, ಬಾಬುರಾವ್, ಉಪನ್ಯಾಸಕ ಪ್ರಭು ಮೇಟಿ ಇದ್ದರು.