ವಿಜಯವಾಣಿ ಸುದ್ದಿಜಾಲ ಕಾಸರಗೋಡು
ರಾಷ್ಟ್ರೀಯ ಹೆದ್ದಾರಿ ಷಟ್ಪಥದ ಚೆರ್ಕಳದಿಂದ ತಲಪಾಡಿವರೆಗಿನ ಮೊದಲ ರೀಚ್‌ನ ಕಾಮಗಾರಿ ಬಹುತೇಕ ಪೂರ್ತಿಗೊಂಡಿದ್ದು, ರಸ್ತೆ ಅಂಚಿಗೆ ಸೈನ್‌ಬೋರ್ಡ್ ಅಳವಡಿಸುವ ಕಾರ್ಯದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಅವಗಣಿಸಲಾಗಿದೆ..!
ಗಡಿ ಪ್ರದೇಶ ತಲಪಾಡಿಯಿಂದ ಹೆದ್ದಾರಿ ಬದಿ ಬೋರ್ಡ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಬೋರ್ಡ್‌ನಲ್ಲಿರುವ ಬರವಣಿಗೆ ಮಲೆಯಾಳದೊಂದಿಗೆ ಆಂಗ್ಲ, ಹಿಂದಿ ಭಾಷೆಯಲ್ಲಿದ್ದರೆ, ಕನ್ನಡಕ್ಕೆ ಇಲ್ಲಿ ಸ್ಥಾನವಿಲ್ಲದಾಗಿದೆ. ಕರ್ನಾಟಕದಿಂದ ಗಡಿನಾಡು ಕಾಸರಗೋಡಿನ ಅಚ್ಚಕನ್ನಡ ಮಣ್ಣು ಮಂಜೇಶ್ವರಕ್ಕೆ ಎಂಟ್ರಿ ಪಡೆದುಕೊಳ್ಳುತ್ತಿದ್ದಂತೆ ಇಲ್ಲಿ ಕನ್ನಡ ಉಪೇಕ್ಷಿಸಲಾಗಿದೆ. ಕಾಸರಗೋಡು ಮಂಜೇಶ್ವರದಲ್ಲಿ ಶೇ.90ರಷ್ಟು ಕನ್ನಡಿಗರಿದ್ದರೂ ಇಲ್ಲಿನ ಸೈನ್ ಬೋರ್ಡ್‌ನಲ್ಲಿ ಕನ್ನಡ ಭಾಷೆ ಹೊರತುಪಡಿಸಿರುವ ಬಗ್ಗೆ ಕನ್ನಡಿಗರಿಂದ ಪ್ರಬಲ ವಿರೋಧ ವ್ಯಕ್ತವಾಗಿದೆ.
ಈ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿದ್ದ ಸೂಚನಾ ಫಲಕಗಳಲ್ಲಿ ಕನ್ನಡ ಒಳಪಡಿಸಲಾಗಿದ್ದರೂ ಇವೆಲ್ಲವನ್ನೂ ಷಟ್ಪಥ ಕಾಮಗಾರಿ ಸಂದರ್ಭ ತೆರವುಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಳವಡಿಸಿರುವ ನೂತನ ಸೂಚನಾ ಫಲಕಗಳಲ್ಲಿ ಕನ್ನಡವನ್ನು ಮೂಲೆಗುಂಪು ಮಾಡುವ ಮೂಲಕ ಗಡಿನಾಡ ಕನ್ನಡಿಗರಲ್ಲಿ ತಾರತಮ್ಯವೆಸಗಿದೆ.
ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಹುಟ್ಟಿ ಬೆಳೆದ ಮಣ್ಣಿನಲ್ಲಿ ಕನ್ನಡಕ್ಕಾಗುತ್ತಿರುವ ಈ ಅವಗಣನೆ ಬಗ್ಗೆ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ಕಾಸರಗೋಡಿನಲ್ಲಿ ಬಲವಂತದ ಮಲೆಯಾಳಂ ಹೇರಿಕೆಯಾಗುತ್ತಿರುವ ಮಧ್ಯೆ, ಕನ್ನಡ ಸೂಚನಾ ಫಲಕ ತೆರವುಗೊಳಿಸುವ ಮೂಲಕ ಇಲ್ಲಿ ಕನ್ನಡ ಭಾಷೆಯನ್ನು ದಮನಿಸುವ ಕೆಲಸ ನಡೆಯುತ್ತಿದೆ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ಪ್ರಾಧಿಕಾರ ಮನವಿ
ತಲಪಾಡಿಯಿಂದ ಕಾಸರಗೋಡುವರೆಗಿನ ಷಟ್ಪಥ ರಸ್ತೆಯಲ್ಲಿ ಅಳವಡಿಸುತ್ತಿರುವ ಸೂಚನಾ ಫಲಕಗಳಿಂದ ಕನ್ನಡಕ್ಕೆ ಕೋಕ್ ಕೊಟ್ಟಿರುವುದಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತನ್ನ ವಿರೋಧ ಸೂಚಿಸಿದೆ. ಕಾಸರಗೋಡಿನಲ್ಲಿ ಹೆದ್ದಾರಿ ಬದಿ ಸ್ಥಾಪಿಸುತ್ತಿರುವ ಸೂಚನಾ ಫಲಕಗಳಲ್ಲಿ ಇತರ ಭಾಷೆಯೊಂದಿಗೆ ಕನ್ನಡ ಅಳವಡಿಸುವಂತೆ ಹೆದ್ದಾರಿ ಪ್ರಾಧಿಕಾರ ಮುಖ್ಯ ಅಭಿಯಂತರಿಗೆ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ. ತಕ್ಷಣ ಸೂಚನಾ ಫಲಕಗಳಲ್ಲಿ ಕನ್ನಡ ಅಳವಡಿಸುವ ಮೂಲಕ ಗಡಿನಾಡ ಕನ್ನಡಿಗರ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವಂತೆ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಮನವಿ ಪ್ರತಿಯನ್ನು ಚೆನ್ನೈಯಲ್ಲಿರುವ ಕೇಂದ್ರ ಭಾಷಾ ಅಲ್ಪಸಂಖ್ಯಾತ ಸಚಿವಾಲಯದ ದಕ್ಷಿಣ ವಲಯ ಕಚೇರಿ ಸಹಾಯಕ ಆಯುಕ್ತರಿಗೂ ಕಳುಹಿಸಿಕೊಡಲಾಗಿದೆ.