ಮಸ್ಕಿ: ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾದ ಮಸ್ಕಿ ಪಟ್ಟಣದ ಶ್ರೀ ಭ್ರಮರಾಂಬ ದೇವಿ ಜಾತ್ರೆ ಹಾಗೂ ದೇವಿ ಪುರಾಣ ಪ್ರಾರಂಭೋತ್ಸವ ಸೆ.22 ರಂದು ಆರಂಭವಾಗಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಪಟ್ಟಣದ ಶ್ರೀ ಭ್ರಮರಾಂಬ ದೇವಸ್ಥಾನದಲ್ಲಿ ಗುರುವಾರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು. ಸೆ.22 ರಂದು ಬೆಳಗ್ಗೆ 6 ರಿಂದ 8 ಗಂಟೆವರೆಗೆ ಘಟಸ್ಥಾಪನೆ ಹಾಗೂ ರಥದ ಪೂಜೆ ನೆರವೇರಲಿದೆ. ಸಂಜೆ 6:30 ರಿಂದ 8:30ರವರೆಗೆ ಮಹಾದೇವಿ ಪುರಾಣ ನಡೆಯಲಿದೆ.
ಬಳಗಾನೂರಿನ ಕಂಬಾಳಿಮಠದ ಶರಭಯ್ಯ ಶಾಸ್ತ್ರೀ ಪುರಾಣ ಪಾರಾಯಣ ಮಾಡಲಿದ್ದಾರೆ. ಕಲಬುರಗಿಯ ಮಹೇಶಕುಮಾರ ಹೇರೂರು ಮತ್ತು ಜೇವರ್ಗಿಯ ವೀರೇಶ ಕಟ್ಟಿಸಂಗಾವಿ ಸಂಗೀತ ಸೇವೆ ನೀಡುವರು. ಅ.1ರಂದು ಬುಧವಾರ ಸಂಜೆ 7 ಗಂಟೆಗೆ ವಿಜಯದಶಮಿಯಂದು ಪುರಾಣ ಮಂಗಲಗೊಳ್ಳಲಿದೆ. ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು, ಸಂತೆಕೆಲ್ಲೂರು ಶ್ರೀ ಗುರುಬಸವ ಶ್ರೀಗಳು, ಅಂಕಲಿಮಠದ ವೀರಭದ್ರ ಶ್ರೀಗಳು ಆಗಮಿಸಲಿದ್ದಾರೆ.
ಅ.3 ರಂದು ದುರ್ಗಪ್ಪ ಅಂಗಡಿ ಸಹಸ್ರವಳ್ಳಿ ಶಿಕಾರಿಪುರ ಅವರಿಂದ ಸಮಗ್ರ ಕೃಷಿಯಲ್ಲಿ ಭರವಸೆಯ ಹೆಜ್ಜೆಗಳು, ಅ.4ರಂದು ಚಂದ್ರಶೇಖರಗೌಡ ಮಸೀದಿಪುರ ಅವರಿಂದ ನಿತ್ಯ ಬದುಕಿನಲ್ಲಿ ಅಧ್ಯಾತ್ಮ, ಅ.5ರಂದು ಗದುಗಿನ ಜಗದ್ಗುರು ಸದಾಶಿವಾನಂದ ಶ್ರೀಗಳು ಭಾರತೀಯ ಸಂಸ್ಕೃತಿ ಮತ್ತು ಮಹಿಳೆ ಕುರಿತು ಮಾತನಾಡಲಿದ್ದಾರೆ. ಪಂಪಯ್ಯಸ್ವಾಮಿ ಅಂತರಗಂಗಿ ಅವರು ರಚಿಸಿದ ಶ್ರೀಭ್ರಮರಾಂಬೆ ಕರುಣೆ ಎನ್ನುವ ಸುಪ್ರಭಾತ ಹಾಗೂ ಭಕ್ತಿಗೀತೆಗಳ ಕೃತಿ ಬಿಡುಗಡೆ, ಅ.6ರಂದು ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಅ.7 ರಂದು ಸೀಗೆ ಹುಣ್ಣಿಮೆಯಂದು ಸಂಜೆ 5 ಗಂಟೆಗೆ ಶ್ರೀಭ್ರಮರಾಂಬ ದೇವಿ ರಥೋತ್ಸವವು ಮಹಿಳೆಯರಿಂದ ಜರುಗಲಿದೆ ಎಂದು ತಿಳಿಸಿದರು.
ದೇವಸ್ಥಾನ ಸಮಿತಿಯ ಗೌರವ ಅಧ್ಯಕ್ಷ ವರರುದ್ರಮುನಿ ಶಿವಾಚಾರ್ಯರು, ಪ್ರಕಾಶ ಧಾರಿವಾಲಾ, ಡಾ.ಬಿ.ಎಚ್.ದಿವಟರ್, ಸಿದ್ದಲಿಂಗಯ್ಯ ಗಚ್ಚಿನಮಠ, ಬಸನಗೌಡ ಪೊಲೀಸ್ ಪಾಟೀಲ್, ಪಂಪಣ್ಣ ಗುಂಡಳ್ಳಿ, ಸಿದ್ದಣ್ಣ ಮುಳ್ಳೂರು, ನಾಗರಾಜ ಸಜ್ಜನ, ಮಲ್ಲಿಕಾರ್ಜುನ ಕ್ಯಾತ್ನಟ್ಟಿ ಇದ್ದರು.