ಜಿಲ್ಲೆ

ಇಂದಿನಿಂದ ರೈಲು ಸೇವೆ ಆರಂಭ - ಸುರೇಶ ಅಂಗಡಿ

ಬೆಳಗಾವಿ: ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ರೈಲು ಸೇವೆ ಮೇ 12ರಿಂದ ಆರಂಭಗೊಳ್ಳಲಿದ್ದು, ಮೊದಲ ಹಂತದಲ್ಲಿ 15 ಜೋಡಿ ರೈಲುಗಳು ಸಂಚರಿಸಲಿವೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರೈಲು ನಿಲ್ದಾಣದ ಕೌಂಟರ್‌ಗಳಲ್ಲಿ ಟಿಕೆಟ್ ಪಡೆಯಲು ಅವಕಾಶವಿಲ್ಲ. ಪ್ರಯಾಣಿಕರು ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಟಿಕೆಟ್ ಬುಕಿಂಗ್ ಮಾಡಬೇಕು. ಕರೊನಾ ಸೋಂಕು ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಪ್ರಯಾಣದ ವೇಳೆ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಬೇಕು.

ಮುಖಕ್ಕೆ ಮಾಸ್ಕ್ ಧರಿಸಬೇಕು. ಟಿಕೆಟ್ ಖಾತ್ರಿಯಾದ ಪ್ರಯಾಣಿಕರನ್ನು ಹೊರತುಪಡಿಸಿ, ಉಳಿದ ಜನರು ರೈಲ್ವೆ ನಿಲ್ದಾಣಕ್ಕೆ ಬರಬಾರದು. ದೆಹಲಿಯಿಂದ ದೇಶದ ವಿವಿಧ ರಾಜ್ಯಗಳಿಗೆ ಹವಾನಿಯಂತ್ರಿತ ರೈಲು ಸೇವೆ ಮಾತ್ರ ಆರಂಭವಾಗಲಿದ್ದು, ಆಯ್ದ ಜಾಗಗಳಲ್ಲಿ ನಿಲುಗಡೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಮೇ 1ರಿಂದ ಸೇವೆ ಆರಂಭಿಸಿದ ಶ್ರಮಿಕ ರೈಲುಗಳು ಬೇಡಿಕೆ ಅನುಸಾರ ಆಯಾ ರಾಜ್ಯಗಳಲ್ಲಿ ಸಂಚರಿಸುತ್ತಿವೆ. ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರ ಆರೋಗ್ಯ ಪರೀಕ್ಷಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಮೆಟ್ರೋ ರೈಲು ಸೇವೆ ಆರಂಭಿಸುವ ಕುರಿತು ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಸದ್ಯ 15 ರೈಲುಗಳ ಸಂಚಾರ ಆರಂಭಿಸಲಾಗಿದ್ದು, ಇಲ್ಲಿ ಎದುರಾಗುವ ಸಮಸ್ಯೆಗಳನ್ನು ಅವಲೋಕಿಸಿ ಉಳಿದ ರಾಜ್ಯಗಳಲ್ಲೂ ರೈಲು ಸೇವೆ ಆರಂಭಕ್ಕೆ ಚಿಂತನೆ ನಡೆಸಲಾಗುವುದು. ಸ್ಥಳೀಯ ಮಟ್ಟದಲ್ಲಿ ರೈಲು ಸೇವೆ ಆರಂಭಿಸುವ ಕುರಿತು ಆಯಾ ರಾಜ್ಯ ಸರ್ಕಾರಗಳೇ ತೀರ್ಮಾನಿಸಲಿವೆ ಎಂದು ಸಚಿವ ಅಂಗಡಿ ತಿಳಿಸಿದರು.

ಲಾಕ್‌ಡೌನ್ ಸಡಿಲಿಕೆ ಬಳಿಕ ಸೋಂಕು ಹೆಚ್ಚಳ

ಲಾಕ್‌ಡೌನ್ ಸಡಿಲಿಕೆ ನಂತರ ಕರೊನಾ ಸೋಂಕಿತರ ಪ್ರಕರಣ ಹೆಚ್ಚುತ್ತಿವೆ. ಹಸಿರು ವಲಯದಲ್ಲೂ ಪ್ರಕರಣ ಪತ್ತೆಯಾಗಿವೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಕಳವಳ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯು ಕಿತ್ತಳೆ ವಲಯದಿಂದ ಹಸಿರು ವಲಯಕ್ಕೆ ಹೋಗುವ ಆತಂಕವಿದೆ. ಲಾಕ್‌ಡೌನ್ ವಿಚಾರವಾಗಿ ಕೆಲವರು ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದು ಅಂಗಡಿ ತಿಳಿಸಿದರು.