ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ಪಂಚಮಸಾಲಿ ಸಮುದಾಯದ ಜಿಲ್ಲಾಧ್ಯಕ್ಷ ಆರ್.ಕೆ.ಪಾಟೀಲ, ಗುಂಡು ಪಾಟೀಲ, ಶಿವು ತಂಬಾಕೆ, ರಾಜು ಮಗದುಮ್ಮ ಇದ್ದರು. 
ಜಿಲ್ಲೆ

ನಿಪ್ಪಾಣಿಯಿಂದ ಮೀಸಲಾತಿ ಹೋರಾಟಕ್ಕೆ ಚಾಲನೆ

ಶಂಕರ ಗೆಜ್ಜಿ

ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಸೆ.10ರಂದು ಬೆಳಗ್ಗೆ 9 ಗಂಟೆಗೆ ನಿಪ್ಪಾಣಿಯಲ್ಲಿ ಚನ್ನಮ್ಮ, ಶಿವಾಜಿ, ಬಸವಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡುತ್ತೇವೆ ಎಂದು ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದ ಗಾಂ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಕೆಲ ತಿಂಗಳುಗಳಷ್ಟೇ ಬಾಕಿ ಇದೆ. ನಮ್ಮ ಸಮಾಜವನ್ನು ಯಾರೂ ಕಡೆಗಣಿಸುವಂತಿಲ್ಲ. 2024ರೊಳಗೆ ನಮಗೆ ಮೀಸಲಾತಿ ಕೊಡಬೇಕು. 2ಎ ಮೀಸಲಾತಿಗೆ ಕಾನೂನು ತೊಡಕು ಎದುರಾದರೆ ಕೇಂದ್ರದಲ್ಲಿ ಒಬಿಸಿ ಪಟ್ಟಿಯಲ್ಲಾದರೂ ಸೇರಿಸಬೇಕು. ನಮ್ಮ ಲಿಂಗಾಯತ ಶಾಸಕರು, ಸಚಿವರಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಕಾಂಗ್ರೆಸ್ ಸರ್ಕಾರದ ಮೇಲೆ ಮೃದು ಧೋರಣೆಯೂ ನಮಗಿಲ್ಲ ಎಂದರು.

ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ ಪಡೆಯಲು 3 ವರ್ಷಗಳಿಂದ 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತ ಬಂದಿದ್ದೇವೆ. ಹಿಂದಿನ ಸರ್ಕಾರ 2ಎ ಮೀಸಲಾತಿ ಬದಲಾಗಿ 2ಡಿ ಮೀಸಲಾತಿ ನೀಡಿತ್ತು. ಸರ್ಕಾರ ಬದಲಾವಣೆ ನಂತರ 2ಡಿ ಮೀಸಲಾತಿ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ನಮ್ಮ ಸಮುದಾಯ ನಾಯಕರು, ಶಾಸಕರು ಎಲ್ಲರೂ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದೇವೆ. ಸಿಎಂ ಅವರು ಬಜೆಟ್ ಮಂಡನೆ ನಂತರ ಮಾತನಾಡುತ್ತೇನೆಂದು ತಿಳಿಸಿದ್ದರು. ಆದರೆ, ಮಂಡನೆಯಾಗಿ ಎರಡು ತಿಂಗಳು ಕಳೆದರೂ ಸಿದ್ದರಾಮಯ್ಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸರ್ಕಾರದ ಗಮನ ಸೆಳೆಯಲು ನಿಪ್ಪಾಣಿಯಿಂದ ಇಷ್ಟಲಿಂಗ ಪೂಜೆ ಮೂಲಕ ಹೋರಾಟ ಆರಂಭಿಸುತ್ತೇವೆ. ನಿಪ್ಪಾಣಿಯಲ್ಲಿ ಹೋರಾಟ ಆರಂಭಿಸಿ ಜಮಖಂಡಿ, ಚಡಚಣ -ಹೀಗೆ ರಾಜ್ಯದ ವ್ಯಾಪ್ತಿ ಹೋರಾಟ ಮಾಡುತ್ತೇವೆ. ತಾಲೂಕಿಗಳಲ್ಲಿ ಮೀಸಲಾತಿ ಜಾಗೃತಿ ಮೂಡಿಸಿ ಜಿಲ್ಲೆಗಳಲ್ಲಿ ಇಷ್ಟಲಿಂಗ ಪೂಜೆ ಮಾಡುತ್ತೇವೆ ಎಂದರು. ಅಖಿಲ ಭಾರತ ಪಂಚಮಸಾಲಿ ಸಮಾಜ ಬೆಳಗಾವಿ ಜಿಲ್ಲಾಧ್ಯಕ್ಷ ಆರ್.ಕೆ.ಪಾಟೀಲ, ನಗರ ಘಟಕದ ಅಧ್ಯಕ್ಷ ಶಿವು ತಂಬಾಕೆ, ಗೌರವ ಅಧ್ಯಕ್ಷ ರಾಜು ಮಗದುಮ್ಮ ಗೋಷ್ಠಿಯಲ್ಲಿದ್ದರು.