ಬೆಂಗಳೂರು: ಮುಂದಿನ ವರ್ಷದಿಂದ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಜಯಂತೋತ್ಸವ, ಪುಣ್ಯತಿಥಿ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಆಚರಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಸ್ವಾತಂತ್ರ್ಯ ದಿನ ನಿಮಿತ್ತ ನಗರದ ಮೆಜೆಸ್ಟಿಕ್ ಸಮೀಪ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಗುರುವಾರ ಮಾಲಾರ್ಪಣೆ ಮಾಡಿ ಮಾತನಾಡಿದರು.
1798 ಆ.15ರಂದು ಜನಿಸಿದ್ದ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಅಸ್ಥಾನದಲ್ಲಿ ವೀರ ಯೋಧನಾಗಿ ಬ್ರಿಟಿಷರ ವಿರುದ್ಧ ಕೆಚ್ಚದೆಯಿಂದ ಹೋರಾಡಿ 1831ರ ಜ.26ರಂದು ವೀರ ಮರಣ ಹೊಂದಿದ್ದರು. ಸ್ವಾತಂತ್ರ್ಯ ದಿನವಾದ ಆ.15ರಂದು ಜನಿಸಿದ್ದು, ಗಣರಾಜ್ಯೋತ್ಸವ ದಿನವಾದ ಜ.26ರಂದು ಹುತಾತ್ಮರಾದದ್ದು ವಿಶಿಷ್ಟ. ಹಾಗಾಗಿ,ಅಪ್ಪಟ ದೇಶಪ್ರೇಮಿ ಆಗಿದ್ದ ಇವರ ಬದುಕು ನಮಗೆಲ್ಲರಿಗೂ ಸ್ಪೂರ್ತಿ ಎಂದು ಸಿಎಂ ಹೇಳಿದರು.
ಕಾಕಾತಾಳೀಯ ಎಂಬಂತೆ ಎರಡು ದಿನಗಳು ಒಂದು ಸ್ವಾತಂತ್ಯೋತ್ಸವ, ಇನ್ನೊಂದು ಗಣ್ಯರಾಜ್ಯೋತ್ಸವ ಆಚರಿಸಲಾಗುತ್ತಿದೆ. ಇವರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಹಾಗಾಗಿ, ಮುಂದಿನ ವರ್ಷದಿಂದ ಸಂಗೊಳ್ಳಿ ರಾಯಣ್ಣ ಅವರ ಜಯಂತೋತ್ಸವ, ಪುಣ್ಯತಿಥಿ ಕಾರ್ಯಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ಮಾಡಬೇಕೆಂದು ಈಗಾಗಲೇ ಬಿಬಿಎಂಪಿಗೆ ಸೂಚನೆ ನೀಡಿದ್ದೇನೆ. ಬೆಂಗಳೂರು ರೈಲು ನಿಲ್ದಾಣಕ್ಕೆ, ಮೇಲ್ಸುತುವೆಗೆ ಸಂಗೊಳ್ಳಿ ರಾಯಣ್ಣ ಹೆಸರು ನಾಮಕಾರಣಕ್ಕೆ ಹಾಗೂ ಮೆಜೆಸ್ಟಿಕ್ ಸಮೀಪ ಪ್ರತಿಮೆ ನಿರ್ಮಾಣಕ್ಕೆ ಕೃಷ್ಣಮೂರ್ತಿ ಕಾರಣೀಭೂತರು ಎಂದು ಸಿಎಂ ಹೊಗಳಿದರು.
ನಿಡುಮಾಮಿಡಿ ಮಹಾಸಂಸ್ಥಾನ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಎಂಎಲ್ಸಿ ಪ್ರಕಾಶ್ ರಾಥೋಡ್ ಸೇರಿ ಮತ್ತಿತರರಿದ್ದರು.