ಗೋಕಾಕ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದ್ದು, ಗೋಕಾಕ ರೋಡ್(ಕೊಣ್ಣೂರ) ರೈಲ್ವೆ ನಿಲ್ದಾಣ ಹೈಟೆಕ್ ಸ್ಟೇಷನ್ ಆಗಿ ಹೊರಹೊಮ್ಮಲಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಗೋಕಾಕ ರೋಡ್ (ಕೊಣ್ಣೂರ) ರೈಲು ನಿಲ್ದಾಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಮೃತ ಭಾರತ ಯೋಜನೆಯಡಿ 18 ಕೋಟಿ ರೂ.ವೆಚ್ಚದ ನಿಲ್ದಾಣ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿ, 50ವರ್ಷಗಳಲ್ಲಿಲ್ಲದ ಅಭಿವೃದ್ಧಿ ವೇಗ ಮೋದಿ ಪ್ರಧಾನಿಯಾದ ನಂತರ ಹೆಚ್ಚಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಆಡಳಿತ ಗಮನಿಸಿದಾಗ ಬಿಜೆಪಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.ದೇಶದ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳಿಂದು ಹೈಟೆಕ್ ಸ್ಪರ್ಶ ಪಡೆಯುತ್ತಿವೆ. ಕೇಂದ್ರದ ಮಾಜಿ ರೈಲು ಸಚಿವ ಹಾಗೂ ಸ್ನೇಹಿತ ಸುರೇಶ ಅಂಗಡಿ ಕನಸು ಇಂದು ನನಸಾಗಿದ್ದು , ಗೋಕಾಕ ರೋಡ್ಹಾ ಗೂ ಘಟಪ್ರಭಾ ರೈಲು ನಿಲ್ದಾಣ ಅಭಿವೃದ್ಧಿಗಾಗಿ ಶ್ರಮವಹಿಸಿದ್ದಾರೆ ಎಂದು ಕಂಬನಿಗೆರೆದರು. ಕೊಣ್ಣೂರು ಸಾವಳಗಿ ರಸ್ತೆಯ ರೈಲ್ವೆ ಬ್ರಿಡ್ಜ್ ರಸ್ತೆ ನವೀಕರಿಸಲು ಪ್ರಯತ್ನಿಸಬೇಕಿದ್ದು, ರಾಜ್ಯ ಸರ್ಕಾರದ ಗಮನಕ್ಕೆ ತರುವೆ ಎಂದು ರಮೇಶ ತಿಳಿಸಿದರು. ರೈಲ್ವೆ ಇಲಾಖೆಯ ಎಚ್‌ಡಿಆರ್‌ಎಂ ಸಂತೋಷ ವರ್ಮಾ, ಸಿಇಇ ಮೀನಾ, ಎಸಿಎಂ ನಿವೇದಿತಾ, ಮಹಾಂತೇಶ ವಕ್ಕುಂದ ಇದ್ದರು.