ಬೆಂಗಳೂರು:ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಜಿಲ್ಲೆಗಳಲ್ಲಿ ಜು.3ರಿಂದ ಮಳೆ ಬಿರುಸುಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಅಲ್ಲದೆ, ರಾಜ್ಯದಲ್ಲೆಡೆ ಮುಂದಿನ 4 ದಿನ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ,ಕೊಡಗು ಮತ್ತು ಹಾಸನದಲ್ಲಿ ಜು.3ರಿಂದ ಜು.5ರವರೆಗೆ ಭಾರಿ ಮಳೆಯಾಗುವ ಸಂಭವ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ.
ಬೆಂ.ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು,ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಮುಂದಿನ 4 ದಿನ ಸಾಧಾರಣ ವರ್ಷಧಾರೆಯಾಗಲಿದೆ.
ಬೆಂಗಳೂರು ನಗರದಲ್ಲಿ ಮುಂದಿನ 2 ದಿನ ಮೋಡ ಕವಿದ ವಾತಾವರಣ ಇರಲಿದೆ. ಪ್ರತಿ ಗಂಟೆಗೆ 40-50 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29 ಮತ್ತು 21 ಡಿ.ಸೆ. ಇರಲಿದೆ.