ಚಿಕ್ಕೋಡಿ ಗ್ರಾಮೀಣ: ಅನೇಕ ಯೋಜನೆಗಳ ಮೂಲಕ ಜೊಲ್ಲೆ ಗ್ರುಪ್ ಕಾರ್ಯೋನ್ಮುಖವಾಗಿದೆ. ಮಲ್ಟಿಸ್ಟೇಟ್ ಕಾಯ್ದೆಯಡಿ ಶ್ರೀ ಬೀರೇಶ್ವರ ಸಹಕಾರಿ ಸಂಸ್ಥೆಯ ಶಾಖೆಗಳನ್ನು ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿ 226 ಶಾಖೆಗಳನ್ನು ವಿಸ್ತರಿಸಿದೆ ಎಂದು ಜೊಲ್ಲೆ ಗ್ರೂಪ್ ಸಂಸ್ಥೆ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ತಾಲೂಕಿನ ಯಕ್ಸಂಬಾ ಸಿಬಿಎಸ್‌ಸಿ ಶಾಲೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜೊಲ್ಲೆ ಗ್ರೂಪ್ ಸಂಸ್ಥೆಗಳಾದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ 35ನೇ ವಾರ್ಷಿಕ ಸಭೆ, ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ 31ನೇ, ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘದ 32ನೇ, ಜೊಲ್ಲೆ ಎಜ್ಯುಕೇಶನ್ ಸೊಸೈಟಿ 30ನೇ, ಯಕ್ಸಂಬಾ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ 18ನೇ, ಲೋಕ ಕಲ್ಯಾಣ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ 14ನೇ ಸೇರಿ ವಿವಿಧ ಅಂಗಸಂಸ್ಥೆಗಳ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿ, ಶೀಘ್ರ ನೂತನ ಶಾಖೆಗಳು ಸಹ ಪ್ರಾರಂಭಿಸಲಾಗುತ್ತಿವೆ. ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಶಾಖೆಗಳನ್ನು ವಿಸ್ತರಿಸಿ ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡುವ ಮಹತ್ತರ ಕಾರ್ಯವಾಗಿದೆ ಎಂದರು.
ಯುವಧುರೀಣ ಬಸವಪ್ರಸಾದ ಜೊಲ್ಲೆ ಮಾತನಾಡಿ, ಜೊಲ್ಲೆ ಗ್ರೂಪ್ ಅಂಗಸಂಸ್ಥೆಗಳು ಕೇವಲ ಆರ್ಥಿಕಾಭಿವೃಧ್ಧಿಯ ಸಂಸ್ಥೆಯಾಗದೇ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಕೃಷಿ ಚುಟುವಟಿಕೆಗಳೊಂದಿಗೆ ನಾಡಿನ ಜನರ ವಿಶ್ವಾಸ ಗಳಿಸಿದ್ದು, ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಹ ಸಂಸ್ಥಾಪಕಿ ಶಶಿಕಲಾ ಜೊಲ್ಲೆ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ಸರ್ವ ರಂಗದಲ್ಲಿ ಸಾಧನೆ ಮಾಡಿದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಕುರಿತ ಪುಸ್ತಕವನ್ನು ಬರುವ ವರ್ಷದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.
ಮಹಾರಾಷ್ಟ್ರ ಮಾಜಿ ಶಾಸಕ ದೀಪಕ ಪಾಟೀಲ, ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ಲೇಖಕ ಸುಶಾಂತ ಗಾವಕರ ಮಾತನಾಡಿ ಜೊಲ್ಲೆ ಗ್ರುಪ್ ಸಂಸ್ಥೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಅನೇಕ ಗಣ್ಯರಿಗೆ, ಶ್ರೀ ಬೀರೇಶ್ವರ ಹಾಗೂ ಜ್ಯೋತಿ ಸಹಕಾರಿ ಸಂಸ್ಥೆಗಳ ಉತ್ತಮ ಶಾಖೆಗಳಿಗೆ, ಜೊಲ್ಲೆ ಶಿಕ್ಷಣ ಸಂಸ್ಥೆಯ ಸಾಧಕ ವಿದ್ಯಾರ್ಥಿಗಳಿಗೆ, ನಿವೃತ್ತ ಶಿಕ್ಷಕರಿಗೆ, ಸಿಬ್ಬಂದಿಗೆ ಸನ್ಮಾನಿಸಲಾಯಿತು. ಅಕಾಲಿಕ ಮರಣ ಹೊಂದಿದ ಸಂಸ್ಥೆಯ ಗ್ರಾಹಕ, ಸದಸ್ಯರು, ಸಿಬ್ಬಂದಿ ವಾರಸುದಾರರಿಗೆ ಪರಿಹಾರ ಚೆಕ್ ಹಾಗೂ ನಿವೃತ್ತಿ ಹೊಂದಿದ ಸಿಬ್ಬಂದಿಗೆ ಪೆನ್ಶನ್ ಪತ್ರ ನೀಡಲಾಯಿತು.
ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಬೀರೇಶ್ವರ ಸಹಕಾರಿ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ, ಉಪಾಧ್ಯಕ್ಷ ಆನಂದ ಪಾಟೀಲ, ಕಾರ್ಖಾನೆ ಅಧಿಕಾರಿಗಳಾದ ಬಿ.ಎ.ಗುರವ, ಎಂ.ಕೆ.ಮಂಗಾವತೆ, ರಮೇಶ ಕುಂಬಾರ, ಎಸ್.ಕೆ.ಮಾನೆ, ಶಿವಪುತ್ರ ಡಬ್ಬ, ಸಂತೋಷ ಪಾಟೀಲ, ಹಸನ ನಾಯಿಕವಾಡಿ, ಎಂ.ಎಂ.ಪಾಟೀಲ ಇತರರು ಇದ್ದರು.