ಹಾರೂಗೇರಿ: ಶಿಕ್ಷಣ ಮನುಷ್ಯನ ಬಹುದೊಡ್ಡ ಆಸ್ತಿ, ಬಡವರ್ಗದ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಲಾಗಿದೆ ಎಂದು ಕುಡಚಿ ಶಾಸಕ ಪಿ. ರಾಜೀವ ಹೇಳಿದರು.
ಸ್ಥಳೀಯ ಹಾರೂಗೇರಿ ಪಟ್ಟಣದ ಸರ್ಕಾರಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಬೌದ್ಧಿಕ ಮತ್ತು ಮಾನಸಿಕವಾಗಿ ಗಟ್ಟಿಯಾಗುವಂತಹ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ತೊಡಗಬೇಕು. ಸರ್ಕಾರದ ಜತೆ ಪಟ್ಟಣದ ಉದ್ಯಮಿಗಳು, ವ್ಯಾಪಾರಸ್ಥರು, ವೈದ್ಯರು ಸಹಾಯ ಸಹಕಾರ ನೀಡಿ ಕೈ ಜೋಡಿಸಿದರೆ ಸರ್ಕಾರಿ ಕಾಲೇಜನ್ನು ಮಾದರಿ ಮಹಾವಿದ್ಯಾಲಯ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ರವಿ ಕೊಕಟನೂರ, ಪುರಸಭೆ ಮುಖ್ಯಾಧಿಕಾರಿ ಜಿ.ವಿ. ಹಣ್ಣಿಕೇರಿ, ಬಿಇಒ ಬಿ.ಎ. ಮೇಕನಮರಡಿ, ಅಕ್ಷರ ದಾಸೋಹ ಅಧಿಕಾರಿ ಕೆ.ಟಿ. ಕಾಂಬಳೆ, ಶಿಕ್ಷಣ ಸಂಯೋಜಕ ಎಚ್. ಬಿ. ಬೆನ್ನಾಡೆ, ಆರ್. ಬಿ. ಬನಶಂಕರಿ, ಬಸನಗೌಡ ಆಸಂಗಿ, ಶಿವಗೊಂಡ ಧರ್ಮಟ್ಟಿ, ರಾವಸಾಬ ಪಾಟೀಲ, ಕಾಂತು ಬಾಡಗಿ, ಸಂತೋಷ ಶಿಂಗಾಡಿ ಉಪಸ್ಥಿತರಿದ್ದರು.