ಧಾರವಾಡ: ಮುಳಗುಂದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಜೀವನ ಮತ್ತು ಸಾಹಿತ್ಯ ಪ್ರವಚನ ಕಾರ್ಯಕ್ರಮವನ್ನು ಆ. 17ರಿಂದ ಸೆ. 15ರವರೆಗೆ ಇಲ್ಲಿನ ಮುರುಘಾಮಠದ ಶಿವಾನುಭವ ಮಂಟಪದಲ್ಲಿ ಏರ್ಪಡಿಸಲಾಗಿದೆ.
ಮುಮ್ಮಿಗಟ್ಟಿಯ ಡಾ. ಬಸವಾನಂದ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ. ಆ. 17ರಂದು ಸಂಜೆ 7 ಗಂಟೆಗೆ ಕಲಬುರ್ಗಿ ಶರಣ ಬಸವೇಶ್ವರ ಪುರಾಣ ಗ್ರಂಥ ಬಿಡುಗಡೆ ಮಾಡಲಿದ್ದು, ಕುಂದಗೋಳದ ಶ್ರೀ ಬಸವಣ್ಣಜ್ಜ ಸ್ವಾಮೀಜಿ, ಲಿಂಗನಾಯನಹಳ್ಳಿ ಶ್ರೀ ನಿರಂಜನ ದೇವರು ಸಾನ್ನಿಧ್ಯ ವಹಿಸುವರು. ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಕಾರ್ಯಕ್ರಮ ಉದ್ಘಾಟಿಸುವರು. ಡಾ. ವೀರಣ್ಣ ರಾಜೂರ ಗ್ರಂಥ ಬಿಡುಗಡೆ ಮಾಡಲಿದ್ದು, ಶಾಸಕ ಎಂ.ಆರ್. ಪಾಟೀಲ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅತಿಥಿಯಾಗಿ ಪಾಲ್ಗೊಳ್ಳುವರು. ಶಿವಲೀಲಾ ಕುಲಕರ್ಣಿ ಅಧ್ಯಕ್ಷತೆ ವಹಿಸುವರು.
ಸೆ.15ರಂದು ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಕೈವಲ್ಯ ದರ್ಪಣ ಹಾಗೂ ವಚನ ಸಾಹಿತ್ಯದ ಪಲ್ಲಕ್ಕಿ ಉತ್ಸವ ನೆರವೇರಲಿದೆ. ಸಂಜೆ 6.30 ಕ್ಕೆ ಪ್ರವಚನ ಮುಕ್ತಾಯ ಸಮಾರಂಭದಲ್ಲಿ ಉಪ್ಪಿನ ಬೆಟಗೇರಿ ಮಠದ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಸೇಡಂನ ಶ್ರೀ ಸದಾಶಿವ ಸ್ವಾಮೀಜಿ ಸಮ್ಮುಖ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.