ವಿಟಿಯು ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿ ಮಹಿಮಾ ರಾವ್‌ಗೆ ಪ್ರೊ.ಕೆ.ಕೆ.ಅಗರವಾಲ್ ಪದವಿ ಪ್ರದಾನ ಮಾಡಿದರು. ಡಾ.ಕರಿಸಿದ್ದಪ್ಪ, ಪ್ರೊ.ಸತೀಶ ಅಣ್ಣಿಗೇರಿ, ಪ್ರೊ.ಎನ್‌ವಿಆರ್ ನಾಯ್ಡು ಇತರರು ಇದ್ದರು. 
ಜಿಲ್ಲೆ

ಸೃಜನಶೀಲತೆಯಿಂದ ದೇಶದ ಪ್ರಗತಿ

ಬೆಳಗಾವಿ: ವಿದ್ಯಾರ್ಥಿಗಳು ಸೃಜನಶೀಲತೆಯನ್ನು ಬದುಕಿನ ಹವ್ಯಾಸವಾಗಿ ರೂಢಿಸಿಕೊಳ್ಳಬೇಕು. ಆಗ ದೇಶ ಪ್ರಗತಿಯತ್ತ ಹೆಜ್ಜೆ ಹಾಕುತ್ತದೆ ಎಂದು ರಾಷ್ಟ್ರೀಯ ಮಾನ್ಯತಾ ಮಂಡಳಿ ಅಧ್ಯಕ್ಷ ಪ್ರೊ.ಕೆ.ಕೆ.ಅಗರವಾಲ್ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಘಟಿಕೋತ್ಸವದಲ್ಲಿ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಜಗತ್ತು ಕ್ಷಣಕ್ಷಣಕ್ಕೂ ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು. ಕಲೆ, ವಿಜ್ಞಾನ, ವಾಣಿಜ್ಯ, ಔದ್ಯೋಗಿಕ ಸೇರಿ ಯಾವುದೇ ರಂಗದಲ್ಲಿ ಹೊಸತನಕ್ಕೆ ತೆರೆದುಕೊಳ್ಳಬೇಕು. ನುರಿತ ಅಭಿಯಂತರು, ತಂತ್ರಜ್ಞಾನಿಗಳಾಗುವುದು ಮುಖ್ಯವಲ್ಲ. ಮೊದಲು ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಸದೃಢ ದೇಶ ಕಟ್ಟಬೇಕಾದ ಜವಾಬ್ದಾರಿ ಪದವೀಧರರ ಮೇಲಿದೆ. ಅದನ್ನು ಸಮರ್ಥವಾಗಿ ನಿಭಾಯಿಸಬೇಕು. ಸತತ ಅಧ್ಯಯನಶೀಲವಾಗಿರಬೇಕು. ಯಾವುದೇ ರಂಗದಲ್ಲಿ ಉದ್ಯೋಗಾವಕಾಶ ಕಡಿಮೆಯಾಗುವುದಿಲ್ಲ. ವೃತ್ತಿಕೌಶಲ ಅಭಿವೃದ್ಧಿಪಡಿಸಿಕೊಂಡು ನಾವೇ ಅವಕಾಶ ಸೃಷ್ಟಿಸಿಕೊಳ್ಳ ಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಕುಲಪತಿ ಡಾ.ಕರಿಸಿದ್ದಪ್ಪ ಮಾತನಾಡಿ, ಇಂದು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ ಬದಲಾಗುತ್ತಿದೆ. ಅದಕ್ಕೆ ಪೂರಕವಾಗಿ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ಕೋರ್ಸ್ ಆರಂಭಿಸ ಲಾಗುತ್ತಿದೆ. ವಿವಿ ಆವರಣದಲ್ಲೇ ರೈಲ್ವೆ ಸಂಶೋಧನಾ ಮತ್ತು ತಂತ್ರಜ್ಞಾನ ಅನ್ವೇಷಣಾ ಕೇಂದ್ರ ಆರಂಭಿಸುವ ಕುರಿತು ಯೋಜನೆ ರೂಪಿಸಲಾಗುತ್ತಿದೆ. ವಿವಿಯಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ ಎಂದರು. ಮೌಲ್ಯಮಾಪನ ಕುಲಸಚಿವ ಪ್ರೊ.ಸತೀಶ ಅಣ್ಣಿಗೇರಿ, ಕುಲಸಚಿವ ಪ್ರೊ.ಎ.ಎಸ್.ದೇಶಪಾಂಡೆ, ಡೀನ್ ಪ್ರೊ.ಎನ್‌ವಿಆರ್ ನಾಯ್ಡು ಇತರರಿದ್ದರು.

ಸಚಿವರ ಗೈರು: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿದ್ದ ಉಪಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಸಿ.ಎನ್., ‘ಡಾಕ್ಟರ್ ಆಫ್ ಸೈನ್ಸ್’ ಪದವಿ ಸ್ವೀಕರಿಸಬೇಕಿದ್ದ ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಗೈರಾಗಿದ್ದರು.

ಅಧಿಕಾರಿಗಳ ಎಡವಟ್ಟು

ಘಟಿಕೋತ್ಸವದಲ್ಲಿ ಪ್ರಮಾಣಪತ್ರ ನೀಡುವ ವೇಳೆ ಎಡವಿದ ವಿಟಿಯು ಅಧಿಕಾರಿಗಳು ಪಿಎಚ್.ಡಿ. ಪದವೀಧರರ ಆಕ್ರೋಶಕ್ಕೆ ತುತ್ತಾದರು. ಮುಖ್ಯ ಅತಿಥಿಗಳು/ಗಣ್ಯರು ನಮಗೆ ಪ್ರಮಾಣ ಪತ್ರ ನೀಡಿ ಗೌರವಿಸುವುದು ರೂಢಿ ಹಾಗೂ ಪದ್ಧತಿ. ಆದರೆ, ವೇದಿಕೆ ಏರುವಾಗ ವಿವಿ ಅಧಿಕಾರಿಯೊಬ್ಬರು ಪ್ರಮಾಣ ಪತ್ರ ನೀಡಿದರು. ಅದನ್ನು ನಾವೇ ವೇದಿಕೆ ಮೇಲಿರುವ ಗಣ್ಯರ ಕೈಗೆ ನೀಡಿ ಪಡೆಯಲು ಮುಜುಗರವಾಯಿತು. ಅಲ್ಲದೆ, ಬೇರೆಯವರ ಹೆಸರಲ್ಲಿರುವ ಪ್ರಮಾಣ ಪತ್ರಗಳನ್ನು ನಮಗೆ ನೀಡಿದ್ದು ಸರಿ ಅಲ್ಲ ಎಂದು ಪದವೀಧರರು ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಪದವೀಧರರ ಮನವೊಲಿಸಿ ಗೊಂದಲಕ್ಕೆ ತೆರೆ ಎಳೆದರು.