ಹೂವಿನಹಡಗಲಿಯ ಬಾವಿಹಳ್ಳಿಯಲ್ಲಿ ನಿಡುಮಾಮಿಡಿ ಕರಿಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ಇಸ್ರೋ ವಿಜ್ಞಾನಿ ಬಿ.ಎಚ್.ಎಂ.ದಾರುಕೇಶ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಇಸ್ರೋ ವಿಜ್ಞಾನಿ ಬಿ.ಎಚ್.ಎಂ.ದಾರುಕೇಶ ಅವರಿಗೆ ಸನ್ಮಾನ ಮಾಡಲಾಯಿತು. ಶಾಸಕ ಕೃಷ್ಣನಾಯ್ಕ, ನಂದಿಪುರದ ಮಹೇಶ್ವರ ಸ್ವಾಮೀಜಿ, ಟ್ರಸ್ಟ್ ಅಧ್ಯಕ್ಷ ಕೊಟ್ರದೇವರು ಇತರರಿದ್ದರು. 
ಜಿಲ್ಲೆ

ಚಂದ್ರಯಾನದಿಂದ ಇತಿಹಾಸ ಸೃಷ್ಟಿ

ರುದ್ರಪ್ಪ ವಾಲಿ

ಹೂವಿನಹಡಗಲಿ: ನಮ್ಮ ದೇಶವನ್ನು ಹಾವಾಡಿಗರ ದೇಶ ಎಂದು ಹೀಯಾಳಿಸಿದವರು ಇಂದು ನಮ್ಮ ಬಳಿಯೇ ಬಂದು ಈ ಸಾಧನೆಯನ್ನು ಹೇಗೆ ಮಾಡಿದ್ದೀರಿ ನಮಗೂ ಹೇಳಿಕೊಡಿ ಎಂದು ಕೇಳುತ್ತಿದ್ದಾರೆ ಎಂದು ಇಸ್ರೋ ವಿಜ್ಞಾನಿ ಬಿ.ಎಚ್.ಎಂ.ದಾರುಕೇಶ ಹೇಳಿದರು.

ತಾಲೂಕಿನ ಬಾವಿಹಳ್ಳಿಯಲ್ಲಿ ನಿಡುಮಾಮಿಡಿ ಕರಿಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಇಸ್ರೋ ವಿಜ್ಞಾನಿ ಬಿ.ಎಚ್.ಎಂ.ದಾರುಕೇಶ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.

ನಾವು ಚಂದ್ರನ ಸಮತಟ್ಟಾದ (ದಕ್ಷಿಣ ಧ್ರುವ) ಪ್ರದೇಶದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು ಭಾರತ ಮತ್ತು ವಿಶ್ವದ ಮಟ್ಟಿಗೆ ದೊಡ್ಡ ಇತಿಹಾಸವಾಗಿದೆ. ಚಂದ್ರನ ಮೇಲೆ ಲ್ಯಾಂಡ್ ಮಾಡಲು ಸುಮಾರು 300 ಬಾರಿ ಪ್ರಯೋಗ ಮಾಡಲಾಗಿತ್ತು. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ನೇರ ಪ್ರಸಾರವು ಯೂಟ್ಯೂಬ್‌ನಲ್ಲಿ 80 ಲಕ್ಷಕ್ಕಿಂತ ಅಧಿಕ ಜನ ವೀಕ್ಷಣೆ ಮಾಡಿದ್ದು ವಿಶ್ವದಾಖಲೆಯಾಗಿದೆ.

ನಾನು ಗ್ರಾಮೀಣ ಭಾಗದಲ್ಲಿ ಅಕ್ಷರ ಕಲಿತವನಾಗಿದ್ದು ಒಳ್ಳೆಯ ಶಿಕ್ಷಕರು ಮತ್ತು ಮಾರ್ಗದರ್ಶಕರು ಸಿಕ್ಕರೆ ಗ್ರಾಮೀಣ ಭಾಗದಲ್ಲಿಯೇ ಅನೇಕ ಜನ ವಿಜ್ಞಾನಿಗಳು ಜನ್ಮತಾಳಲಿದ್ದಾರೆ. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಹೊಸ ಪ್ರಯೋಗಗಳಿಗೆ ಮತ್ತು ಅವರ ಆಲೋಚನೆಗಳಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಿ. ನಾನು ಭೇಟಿ ನೀಡಿದ ಶಾಲೆಗಳ ಮಕ್ಕಳು ಎಲ್ಲ ಗ್ರಹಗಳ ಮೇಲೆ ನಾವು ಹೋಗಬಹುದಲ್ಲ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ ಎಂದರು.

ಮುಂದಿನ ಪೀಳಿಗೆಗೆ ಮಾದರಿ

ನಂದಿಪುರದ ಮಹೇಶ್ವರ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಅಧ್ಯಯನ ಮಾಡಿ ಉನ್ನತ ಸಾಧನೆ ಮಾಡಿರುವ ಬಿ.ಎಚ್.ಎಂ.ದಾರುಕೇಶ ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರು.

ಶಾಸಕ ಕೃಷ್ಣನಾಯ್ಕ ಮಾತನಾಡಿ, ಗ್ರಾಮೀಣ ಭಾಗದ ಶಾಲೆಗಳನ್ನು ಉನ್ನತೀಕರಿಸುವ ಯೋಜನೆ ಹೊಂದಿದ್ದು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಎಂದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ನಿಡುಮಾಮಿಡಿ ಕರಿಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ಕೊಟ್ರದೇವರು, ಗ್ರಾಪಂ ಅಧ್ಯಕ್ಷೆ ಎಚ್.ನೇತ್ರಾವತಿ, ನಿವೃತ್ತ ಎಇಒ ಎಚ್.ಎಂ.ಬೆಟ್ಟಯ್ಯ, ಹಾಸ್ಯಕಲಾವಿದ ಕೊಗಳಿ ಕೊಟ್ರೇಶ, ವಸತಿ ನಿಲಯ ಮೇಲ್ವಿಚಾರಕ ಕೊಟ್ರೇಶ, ಟ್ರಸ್ಟ್ ಸದಸ್ಯರು ಹಾಗೂ ಹೊಳಗುಂದಿ, ಬಾವಿಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.