ಜಿಲ್ಲೆ

ಬಿಎಂಟಿಸಿಯಿಂದ ನೈಸ್ ರಸ್ತೆ, ಮೆಟ್ರೋ ಫೀಡರ್ ಸಾರಿಗೆ ಸೇವೆಗೆ ಚಾಲನೆ

ಬೆಂಗಳೂರು: ನಗರ ಹಾಗೂ ಹೊರ ವಲಯದ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಸಾರಿಗೆ ಸೌಲಭ್ಯ ಒದಗಿಸಲು ಮುಂದಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಇದೀಗ ನೈಸ್ ರಸ್ತೆ, ವಾಯುವಜ್ರ ಸೇವೆ, ಮೆಟ್ರೋ ಫೀಡರ್ ಸಾರಿಗೆ ಸೇವೆಯನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಿ ಪ್ರಯಾಣಿಕ ಸ್ನೇಹಿ ಸೌಲಭ್ಯವನ್ನು ಒದಗಿಸಿಕೊಟ್ಟಿದೆ.

ಮಾದಾವರದ ನೈಸ್ ಮೈದಾನದಲ್ಲಿ ಬಿಎಂಟಿಸಿ ಶನಿವಾರ ಆಯೋಜಿಸಿದ್ದ ನೂತನ ಮಾರ್ಗಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಪ್ರಯಾಣಿಕ ಸ್ನೇಹಿ ಸೌಲಭ್ಯ ಒದಗಿಸಲು ಸಂಸ್ಥೆ ಬದ್ಧವಾಗಿದೆ. ಇದನ್ನಾಧರಿಸಿಯೇ ನೈಸ್ ರಸ್ತೆ, ವಿಮಾನ ನಿಲ್ದಾಣಕ್ಕೆ ಹಾಗೂ ಮೆಟ್ರೋ ಫೀಡರ್ ಸಾರಿಗೆ ಸೇವೆಯನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಿಂದ 25 ಕಿ.ಮೀ. ವರೆಗೆ ಬಸ್ ಕಾರ್ಯಾಚರಣೆ ವ್ಯಾಪ್ತಿಯನ್ನು ಹೊಂದಿದ್ದು, ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸರ್ಕಾರ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ನಿತ್ಯ 5,571 ಬಸ್‌ಗಳಿಂದ 57,565 ಸುತ್ತುವಳಿಗಳ ಮೂಲಕ 11.33 ಲಕ್ಷ ಕಿ.ಮೀ.ಗಳಲ್ಲಿ ಆಚರಣೆಗೊಳಿಸಲಾಗುತ್ತಿದೆ. ಇದರಿಂದ ಪ್ರತಿದಿನ ಸರಾಸರಿ 40 ಲಕ್ಷ ಪ್ರಯಾಣಿಕರು ಸಂಸ್ಥೆಯ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದರು.

ನೈಸ್ ಸಾರಿಗೆ ಸೇವೆಗಳ ಅತಿಹೆಚ್ಚಿನ ಉಪಯೋಗ ಪಡೆಯುವ ಉದ್ದೇಶದಿಂದ ನೈಸ್ ಕಾರಿಡಾರ್ ಸಮೂಹದ ನಿರ್ದೇಶಕ ಸುಧಾಕರ್ ರೆಡ್ಡಿಗೆ ಬಿಎಂಟಿಸಿ ಬಸ್‌ಗಳಿಗೆ ಟೋಲ್ ಶುಲ್ಕವನ್ನು ರದ್ದುಗೊಳಿಸಲು ಅಥವಾ ಕಡಿಮೆ ಮಾಡಿ ಪಾಸ್ ವಿತರಿಸಲು ತಿಳಿಸಿದರು.

ನೈಸ್ ರಸ್ತೆಯಲ್ಲಿ ಬಿಎಂಟಿಸಿ ಬಸ್ ಸೇವೆ:

ಬೆಂಗಳೂರು ಹೊರವಲಯದ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಪ್ರಮುಖ ಸ್ಥಳಗಳಿಂದ ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟಾನಿಕ್ ಸಿಟಿ ವಿಪ್ರೋ ಗೇಟ್‌ಗೆ ಬೆಳಿಗ್ಗೆ ಮತ್ತು ಸಂಜೆ ಒಟ್ಟು 65 ಸುತ್ತುವಳಿಗಳನ್ನು ನೈಸ್ ರಸ್ತೆ ಮಾರ್ಗವಾಗಿ ಆಚರಣೆಗೊಳಿಸಲಾಗುತ್ತದೆ. ತುಮಕೂರು ರಸ್ತೆ ಹಾಗೂ ಎಲೆಕ್ಟಾನಿಕ್ ಸಿಟಿ ನೈಸ್ ರಸ್ತೆ ಜಂಕ್ಷನ್‌ನಿಂದ ವಿವಿಧ ಸಾರಿಗೆಗಳ ಮೂಲಕ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಗಮನಿಸಿ, ಸದರಿ ಪ್ರಯಾಣಿಕರ ಸುರಕ್ಷಿತ ಪ್ರಯಾಣದ ದೃಷ್ಟಿಯಿಂದ ಡಿ.23ರಿಂದಲೇ ಮಾದವಾರದಿಂದ ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟಾನಿಕ್ ಸಿಟಿಗೆ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಾರ್ಗ ಸಂಖ್ಯೆ: ನೈಸ್-10ರಲ್ಲಿ ಪ್ರತಿ 10 ನಿಮಿಷಕ್ಕೆ ಒಂದರಂತೆ ಒಟ್ಟು 147 ಸುತ್ತುವಳಿಗಳನ್ನು ಆಚರಣೆಗೊಳಿಸಲಾಗುವುದು ಎಂದು ಸಚಿವರು ವಿವರಿಸಿದರು.

ಕಾರ್ಯಕ್ರಮದಲ್ಲಿ ದಾಸರಹಳ್ಳಿ ಶಾಸಕ ಎಸ್.ಮುನಿರಾಜು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ. ಜಿ, ಭದ್ರತಾ ಹಾಗೂ ಜಾಗೃತ ದಳ ವಿಭಾಗದ ನಿರ್ದೇಶಕಿ ಕಲಾ ಕೃಷ್ಣಸ್ವಾಮಿ, ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ಹಾಗೂ ಇತರರು ಹಾಜರಿದ್ದರು.

ವಾಯು ವಜ್ರ ಸಾರಿಗೆ:

ನಗರದ ವಿವಿಧ ಪ್ರಮುಖ ಸ್ಥಳಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಸ್ತುತ 17 ಮಾರ್ಗಗಳಲ್ಲಿ 132 ಅನುಸೂಚಿಗಳಿಂದ ಒಟ್ಟು 912 ಸುತ್ತುವಳಿಗಳನ್ನು ಆಚರಣೆಗೊಳಿಸಲಾಗುತ್ತಿದೆ. ಜತೆಗೆ ತುಮಕೂರು ರಸ್ತೆ ಕಡೆಯಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಮಾದಾವರ ನೈಸ್ ರಸ್ತೆ ಜಂಕ್ಷನ್ (ಬಿಐಇಸಿ) ನಿಂದ ಕೆಐಎಗೆ ಮಾರ್ಗ ಸಂಖ್ಯೆ: ಕೆಐಎ-18ರಲ್ಲಿ 5 ಅನುಸೂಚಿಗಳಿಂದ 27 ಸುತ್ತುವಳಿಗಳನ್ನು ಆಚರಣೆಗೊಳಿಸಲಾಗುತ್ತದೆ.

ಮೆಟ್ರೋ ಫೀಡರ್ ಸಾರಿಗೆ:

ನಗರದಲ್ಲಿ 73.81 ಕಿ.ಮೀ. ಉದ್ದದ ಮೆಟ್ರೋ ಮಾರ್ಗವಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಮೆಟ್ರೋ ನಿಲ್ದಾಣಗಳಿಂದ ಪ್ರಸ್ತುತ 38 ಮಾರ್ಗಗಳಲ್ಲಿ 141 ಅನುಸೂಚಿಗಳಿಂದ ಒಟ್ಟು 2,264 ಸುತ್ತುವಳಿಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ. ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಜಾಲಹಳ್ಳಿ ಮೆಟ್ರೋ ನಿಲ್ದಾಣ ಹಾಗೂ ದಾಸರಹಳ್ಳಿ ಮೆಟ್ರೋ ನಿಲ್ದಾಣಗಳಿಂದ 4 ಮಾರ್ಗಗಳಲ್ಲಿ ಒಟ್ಟು 104 ಸುತ್ತುವಳಿಗಳನ್ನು ಆಚರಣೆಗೊಳಿಸಲಾಗುತ್ತಿದೆ.