ಬೆಳ್ತಂಗಡಿ: ತಾಲೂಕಿನ ಸವಣಾಲು ಗ್ರಾಮದ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿ ಜೀರ್ಣೋದ್ಧಾರಗೊಂಡಿದ್ದು, ಧಾಮ ಸಂಪ್ರೋಕ್ಷಣಾ ಮಹೋತ್ಸವ ಫೆ.28ರಿಂದ ಮಾ.2ರವರೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ ಎಂದು ಬಸದಿಯ ಆಡಳಿತ ಮಂಡಳಿ ಅಧ್ಯಕ್ಷ ಕಿಶೋರ್ ಹೆಗ್ಡೆ ಎರ್ಮೆದೋಡಿ ಗುತ್ತು ಮತ್ತು ಕಾರ್ಯದರ್ಶಿ ಸುರೇಶ್ ಕುಮಾರ್ ಉಜಿರೆ ತಿಳಿಸಿದ್ದಾರೆ.
28ರಂದು ಬೆಳಗ್ಗೆ ಗಂಟೆ 8ರಿಂದ ಇಂದ್ರಪ್ರತಿಷ್ಠೆ, ತೋರಣಮುಹೂರ್ತ, ವಿಮಾನಶುದ್ಧಿ, ಮುಖವಸ್ತ್ರ ಉದ್ಘಾಟನೆ, ಮಧ್ಯಾಹ್ನ ಗಂಟೆ 2.30ರಿಂದ ನಾಂದಿಮಂಗಲ ಪೂಜಾವಿಧಾನ, ಕ್ಷೇತ್ರಪಾಲ ಪ್ರತಿಷ್ಠಾಪನೆ, ನಾಗಪ್ರತಿಷ್ಠಾಪನೆ, ಭಗವಾನ್ ಆದಿನಾಥಸ್ವಾಮಿಗೆ 24 ಕಲಶ ಅಭಿಷೇಕ, ಮಹಾಪೂಜೆ ನಡೆಯಲಿದೆ.
ಮಾ.1ರಂದು ಬೆಳಗ್ಗೆ 8 ಗಂಟೆಯಿಂದ ನಿತ್ಯವಿಧಿ ಸಹಿತ ವಾಸ್ತು ಪೂಜಾವಿಧಾನ, ನವಗ್ರಹ ಶಾಂತಿ, ಮಧ್ಯಾಹ್ನ ಗಂಟೆ 2ರಿಂದ ಪದ್ಮಾವತಿ ದೇವಿಗೆ ರಜತಕವಚ ಸಮರ್ಪಣೆ, ಆರಾಧನೆ, ಲಕ್ಷ ಹೂವಿನ ಪೂಜೆ, ಭಗವಾನ್ ಆದಿನಾಥ ಸ್ವಾಮಿಗೆ 54 ಕಲಶ ಅಭಿಷೇಕ, ಮಹಾಪೂಜೆ ನಡೆಯಲಿದೆ.
ಮಾ.2ರಂದು ಬೆಳಗ್ಗೆ ಗಂಟೆ 8ರಿಂದ ಧಾಮ ಸಂಪ್ರೋಕ್ಷಣೆ, ಭಗವಾನ್ ಆದಿನಾಥ ಸ್ವಾಮಿ ಪ್ರತಿಷ್ಠಾಪನೆ, ಶಿಖರಾರೋಹಣ, ಮಧ್ಯಾಹ್ನ ಗಂಟೆ 3.30ರಿಂದ ಭಕ್ತಾಮರ ಆರಾಧನೆ, ಭಗವಾನ್ ಆದಿನಾಥ ಸ್ವಾಮಿಗೆ 108 ಕಲಶ ಅಭಿಷೇಕ, ಮಹಾಪೂಜೆ, ತೋರಣ ವಿಸರ್ಜನೆ ನಡೆಯಲಿದೆ. ಪ್ರತಿಷ್ಠಾಚಾರ್ಯ ಬೆಳ್ತಂಗಡಿ ಜಯರಾಜ ಇಂದ್ರರು, ಪುಷ್ಪರಾಜ ಇಂದ್ರರು ಮತ್ತು ಸ್ಥಳ ಪುರೋಹಿತ ವೃಷಭರಾಜ ಇಂದ್ರರು ಧಾರ್ಮಿಕ ವಿಧಿ-ವಿಧಾನ ನೆರವೇರಿಸಲಿದ್ದಾರೆ. ಸಂಜೆ 5 ಗಂಟೆಯಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಲಿದ್ದು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಲಿದ್ದಾರೆ.