ಸಿಂಧನೂರು: ನಗರದ ವೆಂಕಟೇಶ್ವರ ಕಾಲನಿಯಲ್ಲಿ ಮೊದಲ ಬಾರಿಗೆ ವಿಶ್ವ ಹಿಂದು ಪರಿಷತ್, ಬಜರಂಗದಳ, ಹಿಂದು ಮಹಾಗಣಪತಿ ಉತ್ಸವ ಸಮಿತಿಯಿಂದ ಆ.27 ರಿಂದ ಸೆ.6 ರವರೆಗೆ ಹಿಂದು ಮಹಾಗಣಪತಿ ಉತ್ಸವ ಆಚರಿಸಲಾಗುವುದು ಎಂದು ಸಮಿತಿ ಗೌರವಾಧ್ಯಕ್ಷ ಬಸವರಾಜ ನಾಡಗೌಡ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆ.27ರಂದು ಬೆಳಗ್ಗೆ 10.45ಕ್ಕೆ ಗಣೇಶಮೂರ್ತಿ ಪ್ರತಿಷ್ಠಾಪನೆ, ಗಣೇಶ ಪೂಜೆ, ಪಂಚಾಮೃತ ಅಭಿಷೇಕ, ಗಣಹೋಮ, ಮಹಾಮಂಗಳಾರತಿ ನಡೆಯಲಿದೆ. ಸಂಜೆ 6 ಗಂಟೆಗೆ ಜನಪದ ಗಾಯಕ ಗುರುರಾಜ ಹೊಸಕೋಟೆ ತಂಡದಿಂದ ಜಾನಪದ ಝೇಂಕಾರ ಕಾರ್ಯಕ್ರಮ ಜರುಗಲಿದೆ.
ಆ.28ರಂದು ಸಸಿ ನೆಡುವ ಕಾರ್ಯಕ್ರಮ, ಭಗವದ್ಗೀತಾ ಶ್ಲೋಕ ವಾಚನ, ಆ.29 ರಂದು ಕೋಲಾಟ, ಶಾಲಾ ಮಕ್ಕಳಿಂದ ನೃತ್ಯ, ಆ.30 ರಂದು ಮಹಿಳೆಯರಿಗಾಗಿ ವಿವಿಧ ಸ್ಪರ್ಧೆ ಹಾಗೂ ಮಲ್ಲಗಂಬ, ಆ.31 ರಂದು ಬೆಳಗ್ಗೆ ರಂಗೋಲಿ ಸ್ಪರ್ಧೆ ಹಾಗೂ ಸಂಜೆ ಸರಿಗಮಪ ಖ್ಯಾತಿಯ ಮಾನ್ಯ ಪಾಟೀಲ್, ಜ್ಞಾನೇಶ ಅವರಿಂದ ರಸಮಂಜರಿ ನಡೆಯಲಿದೆ ಎಂದರು.
ಸೆ.1 ರಂದು ಗಂಗಾವತಿ ಪ್ರಾಣೇಶ ಅವರಿಂದ ಹಾಸ್ಯ ಸಂಜೆ, ಸೆ.3 ರಂದು ಎಂಎಲ್ಸಿ ಸಿ.ಟಿ.ರವಿ ಅವರಿಂದ ಭಾಷಣ, ಸೆ. 4 ರಂದು ಸ್ಥಳೀಯ ಕಲಾವಿದರಿಂದ ನೃತ್ಯ ಕಾರ್ಯಕ್ರಮ, ಸೆ. 5 ರಂದು ಕನ್ನೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳಿಂದ ಗೋ ಸಂರಕ್ಷಣೆ ಕುರಿತು ಉಪನ್ಯಾಸ ಹಾಗೂ ರೈತ ಸಮಾವೇಶ ನಡೆಯಲಿದೆ.
ಸೆ. 6 ರಂದು ಬೆಳಗ್ಗೆ 10.30 ರಿಂದ ಬೃಹತ್ ಶೋಭಾಯಾತ್ರೆ ಮತ್ತು ಗಣೇಶ ವಿಸರ್ಜನೆ ಕಾರ್ಯಕ್ರಮ ನಡೆಯಲಿದ್ದು, ವಿಶ್ವ ಹಿಂದು ಪರಿಷತ್ ಉತ್ತರ ಪ್ರಾಂತ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ ಕಲಬುರ್ಗಿ ಉದ್ಘಾಟಿಸುವರು ಎಂದು ತಿಳಿಸಿದರು.
ಸಮಿತಿ ಅಧ್ಯಕ್ಷ ನೆಕ್ಕಂಟಿ ಸುರೇಶ, ಉಪಾಧ್ಯಕ್ಷರಾದ ಕೆ.ಹನುಮೇಶ, ಎಸ್.ಎಸ್.ಜೀನೂರು, ರವಿ.ಎನ್.ಹಿರೇಮಠ, ಮಲ್ಲಿಕಾರ್ಜುನ ಕೆ., ಪ್ರ.ಕಾರ್ಯದರ್ಶಿ ರವಿ ಉಪ್ಪಾರ್, ಕಾರ್ಯದರ್ಶಿ ಅಕ್ಷಯಗೌಡ, ಕೋಶಾಧ್ಯಕ್ಷ ಜಿ.ಕೆ.ವಿಶ್ವನಾಥ ಚೌಧರಿ, ಸಂಚಾಲಕ ಬಸವರಾಜ ಸಾಲಗುಂದ ಇದ್ದರು.