ಸವಣೂರ: ಮುಂಗಾರು ಪ್ರವೇಶ ತಡವಾಗಿದ್ದರಿಂದ ಕಂಗಾಲಾಗಿರುವ ರೈತ ಸಮುದಾಯವು ಮಳೆಗಾಗಿ ಹಲವು ಸಂಪ್ರದಾಯಗಳ ಆಚರಣೆಗೆ ಮುಂದಾಗಿದ್ದಾರೆ. ತಾಲೂಕಿನ ಕಡಕೋಳ ಗ್ರಾಮಸ್ಥರು ಬುಧವಾರ ಕತ್ತೆ ಹಾಗೂ ಕಪ್ಪೆಯನ್ನು ಪೂಜಿಸಿ ಮೆರವಣಿಗೆ ಮಾಡಿದರು.
ಬಿತ್ತನೆ ಪೂರ್ವ ಸಿದ್ಧತೆ ಕೈಗೊಳ್ಳಬೇಕಿದ್ದ ರೈತರಿಗೆ ಜೂನ್ ಮೊದಲ ವಾರ ಕಳೆದರೂ ಸಮರ್ಪಕ ಮಳೆ ಕೊರತೆ ಕಾಡುತ್ತಿದೆ. ಈಗಾಗಲೆ ಬಿತ್ತನೆ ಮಾಡಿರುವ ರೈತರು ನಿತ್ಯ ಮುಗಿಲ ಕಡೆ ಮುಖ ಮಾಡುವಂತಾಗಿದೆ.
ಇಷ್ಟೊತ್ತಿಗೆ ಹೊಲದಲ್ಲಿ ಎಡೆ ಹೊಡೆಯಬೇಕಾಗಿತ್ತು. ಆದರೆ, ತಾಲೂಕಾದ್ಯಂತ ಮಳೆಯ ಸುಳಿವಿಲ್ಲ. ಬಿತ್ತನೆಗಾಗಿ ರೈತರು ಭೂಮಿಯನ್ನು ಹಸನುಗೊಳಿಸಿ ಬೀಜ ಮತ್ತು ಗೊಬ್ಬರ ಸಂಗ್ರಹಿಸಿಕೊಂಡಿದ್ದಾರೆ. ಮಳೆ ಕೈಕೊಟ್ಟಿದ್ದರಿಂದ ಗ್ರಾಮಗಳಲ್ಲಿ ಕತ್ತೆ-ಕಪ್ಪೆ ಮೆರವಣಿಗೆ, ಗುರ್ಚಿಪೂಜೆ ಇತ್ಯಾದಿ ಆಚರಣೆಗಳನ್ನು ಕೈಗೊಂಡು ಮಳೆರಾಯನ ಮೊರೆ ಹೋಗುತ್ತಿದ್ದಾರೆ.
ಕಡಕೋಳ ಗ್ರಾಮದ ಬಸವೇಶ್ವರನಗರದ ಹನುಮಂತ ದೇವಸ್ಥಾದ ಆವರಣದಲ್ಲಿ ರೈತರು ಕತ್ತೆ ಮತ್ತು ಕಪ್ಪೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆ ಉದ್ದಕ್ಕೂ, ಹುಯ್ಯೋ ಹುಯ್ಯ ಮಳೆರಾಯ’ ಎಂದು ಕೂಗುತ್ತ ಗ್ರಾಮದ ಎಲ್ಲ ದೇವಸ್ಥಾಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಮುಂದಿನ ಮೂರು ದಿನದೊಳಗೆ ಮಳೆಯಾಗಲಿ ಎಂದು ಪ್ರಾರ್ಥಿಸಿದರು. ನಂತರ, ಹನುಮಂತದೇವರ ದೇವಸ್ಥಾನದಲ್ಲಿ ಅನ್ನ ಪ್ರಸಾದ ಕೈಗೊಳ್ಳಲಾಯಿತು.
ಗ್ರಾಮದ ನಾಗಪ್ಪ ದೊಡ್ಡಮನಿ, ಕುರುವತ್ತೆಪ್ಪ ದೊಡ್ಡಮನಿ, ಕುರುವತ್ತೆಪ್ಪ ಗುಂಜಳ, ಕಲ್ಲಪ್ಪ ಭಾವಿಕಟ್ಟಿ, ನಾಗಪ್ಪ ಕಲ್ಲೇದೇವರ, ಚನ್ನಪ್ಪ ಹುಲಗೂರ, ಮುದಕಣ್ಣ ಅಮರಾಪೂರ, ಹೇಮಣ್ಣ ಗುಂಜಳ ಹಾಗೂ ಇತರರು ಪಾಲ್ಗೊಂಡಿದ್ದರು.