ಮಡಿಕೇರಿ: ಸಮಾಜದಲ್ಲಿ ಕ್ರೀಡಾಕೂಟಗಳಿಂದ ಸೌಹಾರ್ದ ಬೆಳೆಯಲು ಸಹಕಾರಿಯಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಪಟ್ಟರು.
ಸಿದ್ದಾಪುರದಲ್ಲಿ ಆಯೋಜಿಸಿದ್ದ ಜಿಲ್ಲಾ ಹಿಂದು ಮಲಯಾಳಿ ಫುಟ್ಬಾಲ್ ಕಪ್ ಸೆಮಿಫೈನಲ್ ಪಂದ್ಯಕ್ಕೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ವಿವಿಧ ಜನಾಂಗ ಹಾಗೂ ಸಮಾಜಗಳ ಜನರ ನಡುವೆ ಕ್ರೀಡಾಕೂಟಗಳು ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಹಿಂದು ಮಲಯಾಳಿ ಫುಟ್ಬಾಲ್ ಕಪ್ ನಡೆಯುತ್ತಿರುವುದು ಶ್ಲಾಘನೀಯ. ಸಮಾಜದ ಜನರನ್ನು ಕ್ರೀಡೆಯ ಮೂಲಕ ಒಂದುಗೂಡಿಸುವುದು ಒಳ್ಳೆಯ ವಿಷಯವಾಗಿದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಹಿಂದು ಮಲಯಾಳಿ ಫುಟ್ಬಾಲ್ ಕಪ್ ಸಂಸ್ಥಾಪಕ ಮರಗೋಡುವಿ ದರ್ಶನ್ ಸುಕುಮಾರ್ ಅವರನ್ನು ಅಭಿನಂದಿಸಲಾಯಿತು. ಕೊಡಗು ಜಿಲ್ಲಾ ಹಿಂದು ಮಲಯಾಳಿ ಫುಟ್ಬಾಲ್ ಕಪ್ ಸಮಿತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಸಜೀಶ್ ಚೆನ್ನಯ್ಯನಕೋಟೆ, ರತೀಶ್ ಚೆನ್ನಯ್ಯನಕೋಟೆ, ಕೆ.ಕೆ.ಬಾಲಕೃಷ್ಣ , ವಿವೇಕಾನಂದ ಮರಗೋಡು ಇದ್ದರು.