ಜಿಲ್ಲೆ

ಅಂತರಂಗ ಜಾಗೃತಿಯಿಂದ ಯಶಸ್ಸು ಸಾಧ್ಯ

Chitradurga - Desk - Suresh lamani

ನ್ಯಾಮತಿ: ಯಾವ ಮನೆಗಳಲ್ಲಿ ಮಹಿಳೆ ಅಂತರಂಗದಲ್ಲಿ ಜಾಗೃತಳಾಗುತ್ತಾರೋ ಅಂತಹ ಮನೆ ಎಂದಿಗೂ ಯಶಸ್ಸಿನ ಉತ್ತಂಗದಲ್ಲಿರುತ್ತದೆ ಎಂದು ಪುಷ್ಪಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ತಾಲೂಕಿನ ಯರಗನಾಳ್ ಗ್ರಾಮದಲ್ಲಿ ಇತ್ತೀಚೆಗೆ ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದ ನ್ಯಾಮತಿ ಮತ್ತು ಹೊನ್ಯಾಳಿ ತಾಲೂಕು ಮಟ್ಟದ ಪುಷ್ಪಗಿರಿ ಸ್ವ-ಸಂಘಗಳ ಸ್ನೇಹ ಸಮ್ಮಿಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾವು ಎಂಬ ಮನೋಭಾವ ಎಲ್ಲರಲ್ಲಿಯೂ ಮೂಡಬೇಕು. ಆಗ ಮನೆಗಳಿಂದ ಜಾಗೃತಿ ಬದಲಾವಣೆಯಾಗಿ ದೇಶ ಅಭಿವೃದ್ಧಿ ಕಾಣಲು ಸಾಧ್ಯವಿದ್ದು ಹಳ್ಳಿಗಳಿಂದ ಬದಲಾವಣೆ ಆರಂಭವಾಗಲಿ ಎಂದು ಆಶಿಸಿದರು.

ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ನಾವು ರಾಜಕಾರಣಿಗಳು. ಇಲ್ಲಿ ಅಧಿಕಾರ ಕುರ್ಚಿ ಶಾಶ್ವತವಲ್ಲ. ಆದರೆ ಮಾಡುವ ಕಾಯಕ ಶಾಶ್ವತ. ಅಂತಹ ಕೆಲಸವನ್ನು ಗ್ರಾಮೀಣಾಭಿವೃದ್ಧಿ ಸ್ವ-ಸಂಘಗಳ ಮೂಲಕ ಮಹಿಳೆಯರನ್ನು ಒಗ್ಗೂಡಿಸಿ ಸಾಮಾಜಿಕ ಕಳಕಳಿಯಿಂದ ಶಿಸ್ತುಬದ್ಧವಾಗಿ ವ್ಯವಹಾರ ಮಾಡಿದ ರಾಜ್ಯದ ಮೊದಲ ಮಠವೆಂಬ ಹೆಗ್ಗಳಿಕೆಗೆ ಶ್ರೀಕ್ಷೇತ್ರ ಪುಷ್ಪಗಿರಿ ಮಠ ಪಾತ್ರವಾಗಿದೆ ಎಂದರು.

ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಈಗಾಗಲೇ ರಾಜ್ಯದ 10 ಜಿಲ್ಲೆಗಳಲ್ಲಿ ಪುಷ್ಪಗಿರಿ ಸ್ವ-ಸಂಘ ಹೆಸರಿನಲ್ಲಿ ಸಾವಿರಾರು ಸಂಘಗಳನ್ನು ನಿರ್ವಿುಸಿ, ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಮಠ ಮಾಡುತ್ತಿರುವುದು ಸಂತಸದ ವಿಷಯ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 20 ಗ್ರಾಮೀಣ ಮಹಿಳೆಯರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಯರಗನಾಳ್ ಗ್ರಾಮದ ರುದ್ರಗೌಡ್ರು ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಎಂ.ಆರ್. ಮಹೇಶ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸುರೇಶ್ ಕಂಚಿ, ಸಾಧು ಸಮಾಜದ ತಾಲೂಕು ಅಧ್ಯಕ್ಷ ಶಿವಪ್ಪ ಕೋಡಿಕೊಪ್ಪ, ಗಜೇಂದ್ರ ಗೆಜ್ಜುರು ಕೆಂಚಿಕೊಪ್ಪ, ವೀರಣ್ಣ, ಶೇಖರಪ್ಪ, ಗದ್ದೀಗೇಶಪ್ಪ, ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ನಾಗಯ್ಯ, ಯರಗನಾಳ್ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಇತರರಿದ್ದರು.