ಕೊಲೆಯಾದ ತರುಣ್‌ ಹಾಗೂ ರಾಜಾಕಾಲುವೆಯಲ್ಲಿ ಮೂಟೆಯಲ್ಲಿ ಸಿಕ್ಕ ಆತನ ಶವ. 
ಜಿಲ್ಲೆ

ಜೊತೆಗಿದ್ದ ಗೆಳೆಯರೇ ಒಟ್ಟಿಗೇ ಉಂಡು, ಕೊಂದರು; ಡ್ರಗ್ಸ್‌ ನಶೆ, ಹಣದ ಆಸೆಗೆ ಬಿದ್ದು ಅಪಹರಿಸಿ ಕೊಲೆ ಮಾಡಿದ್ರು..

ಬೆಂಗಳೂರು: ರಾಜಧಾನಿಯ ರಾಜರಾಜೇಶ್ವರಿ ನಗರದ ರಾಜಾಕಾಲುವೆ ಬಳಿ 20ರ ವಯಸ್ಸಿನ ಯುವಕ ತರುಣ್‌ ಶವ ಪತ್ತೆಯಾದ ಹಿನ್ನೆಲೆಯಲ್ಲಿ ತನಿಖೆಗಿಳಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆ ಕುರಿತ ಮತ್ತಷ್ಟು ಮಾಹಿತಿ ಹೊರಬಿದ್ದಿದೆ.

ಭಾರತೀನಗರ ಮುರುಗಪಿಳ್ಳೈ ನಿವಾಸಿ ತರುಣ್‌ (20) ಕೊಲೆ ಸಂಬಂಧ ನಾಸಿರ್‌ ಹಾಗೂ ಸೈಯದ್‌ ತಜ್ಮುಲ್‌ ಎಂಬ ಸಹೋದರರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ತರುಣ್‌ನನ್ನು ಕೊಲೆ ಮಾಡಿದ್ದವರು ಬೇರಾರೂ ಅಲ್ಲ, ತರುಣ್‌ ತಂದೆ ಜತೆ ಕೆಲಸಕ್ಕಿದ್ದವರು. ಅಷ್ಟೇ ಅಲ್ಲ, ಅವರು ತರುಣ್‌ ಗೆಳೆಯರು ಕೂಡ.

ನ. 1ರಂದು ಪಟಾಕಿ ತರುವುದಾಗಿ ತರುಣ್‌ ಮನೆಯಿಂದ ಹೊರಟ್ಟಿದ್ದಾಗ ಆತನ ಜತೆಗೇ ಇದ್ದ ಈ ಕೊಲೆ ಆರೋಪಿಗಳು ಬಳಿಕ ಪಟಾಕಿ ಖರೀದಿ ನಂತರ ಡ್ರಗ್ಸ್‌ ಸೇವಿಸಿದ್ದರು. ಅಲ್ಲಿಂದ ತರುಣ್‌ನನ್ನು ತಮ್ಮ ಸಂಬಂಧಿಯ ಮನೆಗೆ ಕರೆತಂದಿದ್ದ ಆರೋಪಿಗಳು ಜೊತೆಗೇ ಊಟ ಮಾಡಿದ್ದರು.

ಆ ನಂತರ ತರುಣ್‌ ಜತೆ ಜಗಳವಾಡಿಕೊಂಡ ಅವರು ತರುಣ್‌ನಿಂದಲೇ ಆತನ ತಂದೆಗೆ ಕರೆ ಮಾಡಿಸಿ ತನ್ನ ಅಪಹರಣವಾಗಿದೆ ಎಂದು ಹೇಳಿಸಿ, 50 ಲಕ್ಷ ರೂ. ಒತ್ತೆ ಹಣಕ್ಕೆ ಬೇಡಿಕೆ ಇರಿಸಿದ್ದರು.

ಆದರೆ ಯಾವಾಗ ತರುಣ್‌ ತಂದೆ ಮಣಿ, ಪೊಲೀಸರ ಸಹಾಯ ಕೋರಿದ್ದು ತಿಳಿಯಿತೋ ಆಗ ಆರೋಪಿಗಳು ಗೆಳೆಯ ತರುಣ್‌ನನ್ನು ಕೊಲೆ ಮಾಡಿ ಶವ ಮೂಟೆ ಕಟ್ಟಿ ರಾಜಾ ಕಾಲುವೆಗೆ ಎಸೆದಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳು ತರುಣ್‌ ತಂದೆ ಮಣಿ ಜೊತೆ ಐದಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.