ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ಫ್ರೆಂಡ್ಸ್ ಆಫ್ ಬಂಡೀಪುರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪರಿಸರಾಸಕ್ತರು ಕಳ್ಳಬೇಟೆ ನಿಗ್ರಹ ಶಿಬಿರದ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. 
ಜಿಲ್ಲೆ

ಫ್ರೆಂಡ್ಸ್ ಆಫ್ ಬಂಡೀಪುರ ಸಂಪನ್ನ

ಗುಂಡ್ಲುಪೇಟೆ: ಅರಣ್ಯ ಇಲಾಖೆ ಬಂಡೀಪುರದಲ್ಲಿ ಪ್ರತಿ ತಿಂಗಳು ಪರಿಸರಾಸಕ್ತರಿಗೆ ಆಯೋಜಿಸುತ್ತಿರುವ ಫ್ರೆಂಡ್ಸ್ ಆಫ್ ಬಂಡೀಪುರ ಕಾರ್ಯಕ್ರಮದ 38ನೇ ತಂಡ ಸೋಮವಾರ ಯಶಸ್ವಿಯಾಗಿ ಸಂಪನ್ನಗೊಂಡಿತು.

ಪರಿಸರ ಮತ್ತು ವನ್ಯಜೀವಿಗಳ ಕುರಿತು ಯುವಕರಿಗೆ ಹೆಚ್ಚಿನ ಅನುಭವ ಮತ್ತು ಅವಕಾಶ ಕಲ್ಪಿಸುವ ಸಲುವಾಗಿ ಅರಣ್ಯ ಇಲಾಖೆ ಆನ್‌ಲೈನ್‌ನಲ್ಲಿ ಆಯೋಜಿಸುತ್ತಿದ್ದ ಫ್ರೆಂಡ್ಸ್ ಆಫ್ ಬಂಡೀಪುರ ಹೆಸರಿನ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ನೋಂದಾಯಿಸಿಕೊಳ್ಳುತ್ತಿದ್ದ ಉತ್ಸಾಹಿಗಳು ಬೇರೆ ಬೇರೆ ಸ್ಥಳಗಳಿಂದ ಬಂಡೀಪುರಕ್ಕೆ ಬಂದು ಮೂರು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು.

ನೀಲಗಿರಿ ಜೀವವೈವಿಧ್ಯ ತಾಣವಾದ ಬಂಡೀಪುರ ಅರಣ್ಯದಲ್ಲಿರುವ ಸಸ್ತನಿಗಳು, ಕಪ್ಪೆಗಳು, ಪಕ್ಷಿಗಳು, ಚಿಟ್ಟೆಗಳು, ಹಾವುಗಳು, ಹಾವು ಕಡಿತ ಕುರಿತು ಅರಣ್ಯಾಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಶಿಬಿರ ವೀಕ್ಷಕರೊಂದಿಗೆ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಸದಾಕಾಲ ತಂಪಾಗಿರುವ ಅಲ್ಲಿನ ಪರಿಸರವನ್ನು ಆಸ್ವಾದಿಸಿದರು. ನ್ಯಾಚುರಾಲಿಸ್ಟ್‌ಗಳಾದ ಧರ್ಮ ಹಾಗೂ ಸಂಜಯ್ ಅವರಿಂದ ಪ್ರಾಣಿಪಕ್ಷಿಗಳು, ಸಸ್ಯವರ್ಗ ಹಾಗೂ ಬೆಟ್ಟಗುಡ್ಡಗಳ ಬಗ್ಗೆ ಮಾಹಿತಿ ಪಡೆದರು.

ಮರಗಳ ಕಳ್ಳಬೇಟೆ ತಡೆ ಶಿಬಿರಕ್ಕೆ ಭೇಟಿ ನೀಡಿ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಕಳೆದ 35 ವರ್ಷಗಳಿಂದ ವಾಚರ್ ಆಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯಿಂದ ಹುಲಿ, ಆನೆ ಬಂದರೆ ಏನು ಮಾಡಬೇಕು ಎಂದು ಪ್ರಶ್ನಿಸಿದರು. ಆನೆಯನ್ನು ಕಂಡರೆ ನಿಲ್ಲಬಾರದು, ಹುಲಿಯನ್ನು ಕಂಡರೆ ಓಡಬಾರದು ಎಂದು ಸಿಬ್ಬಂದಿ ಸಲಹೆ ನೀಡಿದರು.

ಪ್ರಕೃತಿ ನಡಿಗೆ ಸಂದರ್ಭದಲ್ಲಿ ಹುಲಿ, ಹಿಂಡು ಹಿಂಡಾಗಿ ಕಾಣಿಸುವ ಚುಕ್ಕೆ ಜಿಂಕೆಗಳು, ಆನೆಗಳು, ಸೀಳುನಾಯಿಗಳು, ಕಾಟಿಗಳು, ದೊಡ್ಡ ಮರಗಳ ಮೇಲೆ ಬೇಟೆ ಹೊಂಚು ಹಾಕಿ ಕೂರುವ ಚಿರತೆಗಳು, ಕೆರೆಗಳ ಸಮೀಪ ಸಾಂಬಾರ್ ಜಿಂಕೆ ಹಾಗೂ ಬಿಳಿಕತ್ತಿನ ರಣಹದ್ದುಗಳನ್ನು ವೀಕ್ಷಿಸಿದರು.

ಅರಣ್ಯದ ಬಗ್ಗೆ ನಾವು ಅಂದುಕೊಂಡಿದ್ದೇ ಬೇರೆ. ಆದರೆ ಇಲ್ಲಿನ 3 ದಿನಗಳನ್ನು ಅದ್ಭುತವಾಗಿ ಬಳಸಿಕೊಂಡ ತೃಪ್ತಿಯೇ ಬೇರೆಯಾಗಿದೆ. ಅರಣ್ಯ, ಪರಿಸರ, ವನ್ಯಜೀವಿ, ಜೀವವೈವಿಧ್ಯತೆಗಳ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳಲು ನೆರವಾಗಿದೆ. ಸಫಾರಿಗೆ ಮಾತ್ರ ಹೋಗಿದ್ದ ನಮಗೆ ಬಂಡೀಪುರದ ಸಮಗ್ರ ಸೌಂದರ್ಯವನ್ನು ಒಟ್ಟಿಗೆ ಅನುಭವಿಸಲು ಸಾಧ್ಯವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಭಾಗವಹಿಸುವುದು ಹೇಗೆ?: ಬೆಂಗಳೂರು, ಮಂಗಳೂರು, ಮೈಸೂರು ಮುಂತಾದ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ನಿರಂತರ ಕಾರ್ಯದೊತ್ತಡದಿಂದ ಬಳಲುತ್ತಿರುವ ಹಾಗೂ ಪರಿಸರದ ಬಗ್ಗೆ ಆಸಕ್ತಿಯಿರುವ ಯುವಕರು, ಐಟಿ-ಬಿಟಿ ಉದ್ಯೋಗಿಗಳಿಗಾಗಿ ಅರಣ್ಯ ಇಲಾಖೆ ಫ್ರೆಂಡ್ಸ್ ಆಫ್ ಬಂಡೀಪುರ ಹೆಸರಿನ ಗ್ರೂಪ್ ತೆರೆದಿದೆ. ಇಲ್ಲಿಗೆ ಯಾರೂ ಬೇಕಾದರೂ ಸೇರುವ ಮೂಲಕ ಪ್ರತಿ ತಿಂಗಳೂ ಆಯೋಜಿಸುವ ಕಾರ್ಯಕ್ರಮಗಳ ಮಾಹಿತಿ ಪಡೆದುಕೊಳ್ಳಬಹುದು. ಇಲ್ಲಿ ಮೂರು ಹಗಲು, ಎರಡು ರಾತ್ರಿ ಬಂಡೀಪುರದಲ್ಲಿ ಉಳಿಯಲು ವಸತಿ, ಊಟ, ಸಫಾರಿ, ನೇಚರ್ ವಾಕ್, ಹಿಮವದ್ ಗೋಪಾಸ್ವಾಮಿ ಬೆಟ್ಟಕ್ಕೆ ಭೇಟಿ, ಅಧಿಕಾರಿಗಳೊಂದಿಗೆ ಸಂವಾದ ಸೇರಿ 9500 ರೂ. ನಿಗದಿಸಲಾಗಿದೆ.

ಪ್ರತಿ ತಿಂಗಳೂ ಇನ್‌ಸ್ಟಾದಲ್ಲಿ ಇದರ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು ಯಾರು ಮೊದಲು ಪಾವತಿಸುವರೋ ಅವರನ್ನು ಆದ್ಯತೆ ಮೇರೆಗೆ ನೋಂದಾಯಿಸಲಾಗುತ್ತದೆ. ಶನಿವಾರ, ಭಾನುವಾರ ಹಾಗೂ ಸೋಮವಾರ ಕಾರ್ಯಕ್ರಮ ನಡೆಸಲಾಗುತ್ತದೆ. ಎಲ್ಲಿಂದಲೋ ಆಗಮಿಸುವ ಯುವಕರನ್ನು ಪರಸ್ಪರ ಪರಿಚಯಿಸಿ 20 ಜನರ ತಂಡ ರಚಿಸಲಾಗುತ್ತದೆ. ಇವರಿಗೆ ಅರಣ್ಯ ಮತ್ತು ಪರಿಸರದ ಬಗ್ಗೆ ಅರಣ್ಯ ಇಲಾಖೆಯ ಶಿಕ್ಷಣಾಧಿಕಾರಿ ಮೋಹನ್ ಶಿಕ್ಷಣ ನೀಡುತ್ತಾರೆ.

ಬಂಡೀಪುರದ ಡಾರ್ಮೆಟರಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯವರೆಗೆ 38 ಕಾರ್ಯಕ್ರಮಗಳು ಸಂಪನ್ನಗೊಂಡಿದ್ದು ಮೊದಲು ತಿಂಗಳಿಗೊಮ್ಮೆ ಆಯೋಜಿಸುತ್ತಿದ್ದ ಕಾರ್ಯಕ್ರಮವನ್ನು ಪ್ರತಿ ವಾರವೂ ನಡೆಸಲಾಗುತ್ತಿದೆ. ಇದರಲ್ಲಿ ಪಾಲ್ಗೊಂಡವರಿಗೆ ಅರಣ್ಯ ಇಲಾಖೆಯಿಂದ ಪ್ರಮಾಣಪತ್ರ, ನೀರಿನ ಬಾಟಲಿ ಹಾಗೂ ಟಿ ಶರ್ಟ್ ನೀಡಲಾಗುತ್ತಿದೆ.

ಹೆಚ್ಚಿನ ಪ್ರವಾಸಿಗಳು ಬಂಡೀಪುರಕ್ಕೆ ಹುಲಿಗಳನ್ನು ನೋಡುವುದಕ್ಕಾಗಿ ಮಾತ್ರ ಬರುತ್ತಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಈವರೆಗೆ 870 ಜನರು ಭಾಗವಹಿಸಿದ್ದಾರೆ. ಇವರಲ್ಲಿ ಹಲವರು ಅರಣ್ಯ ಸಂರಕ್ಷಣೆಯ ಸಂಕಷ್ಟಗಳನ್ನು ಅರಿತು ಕ್ಯಾಂಪ್ ಸಿಬ್ಬಂದಿಗೆ ಅಗತ್ಯವಾದ ವಸ್ತುಗಳನ್ನು ಕೊಡುಗೆ ನೀಡುತ್ತಿದ್ದಾರೆ.

ಎನ್.ಸಿ.ಮಹದೇವ ಬಂಡೀಪುರ ಆರ್‌ಎಫ್‌ಒ