ಜಿಲ್ಲೆ

ಎಣ್ಣೆ ಪಾರ್ಟಿಗೆ ಕರೆದು ಕೊಲೆ, ಚಾಕುವಿನಿಂದ ಚುಚ್ಚಿದ್ದರ ಜತೆಗೆ ತಲೆಯ ಮೇಲೆ ಕಲ್ಲು ಹಾಕಿದ ಸ್ನೇಹಿತರು

ಚಿಕ್ಕಬಳ್ಳಾಪುರ: ನಗರದ ಪೊಲೀಸ್ ಠಾಣೆಯ ಸಮೀಪದಲ್ಲಿಯೇ ಚಾಕುವಿನಿಂದ ಚುಚ್ಚಿದ್ದರ ಜತೆಗೆ ತಲೆಯ ಮೇಲೆ ಕಲ್ಲು ಹಾಕಿ ಯುವಕನನ್ನು ಕೊಲೆ ಮಾಡಲಾಗಿದೆ. ಕೊರಚರಪೇಟೆಯ ಎಲ್.ಎಂ.ಎನ್.ಶೇಖರ್ (39) ಮೃತ. ಕಾರ್ಖಾನೆಪೇಟೆಯ ಶಿವಕುಮಾರ್ (36) ಮತ್ತು ಸಮನ್ಸ್ ಸಾಗರ್ (38) ಆರೋಪಿಗಳು. ಕೊಲೆ ಪ್ರಕರಣ ನಡೆದ ಕೆಲವೇ ಘಟನೆಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

*ಅನೈತಿಕ ಸಂಬಂಧ ಕಾರಣ?

ಕೊಲೆಗೆ ಅನೈತಿಕ ಸಂಬಂಧವೇ ಪ್ರಮುಖ ಕಾರಣ ಎನ್ನಲಾಗಿದೆ. ಶಿವಕುಮಾರ್ ಮತ್ತು ಶೇಖರ್ ಸ್ನೇಹಿತರು. ಹಿಂದೆ ಇಬ್ಬರು ಸೇರಿ ಹಣದ ಲೇವಾದೇವಿ ವ್ಯವಹಾರ ಮಾಡುತ್ತಿದ್ದರು. ಇದರ ನಡುವೆ ಶಿವಕುಮಾರ್ ಪತ್ನಿಯೊಂದಿಗೆ ಶೇಖರ್ ಅನೈತಿಕ ಸಂಬಂಧ ಹೊಂದಿದ್ದು ಇದರ ವಿಚಾರವಾಗಿ ಕಳೆದ ಮೂರು ವರ್ಷಗಳಿಂದಲೂ ಗಲಾಟೆ ನಡೆಯುತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ರಾಜೀ ಸಂಧಾನವಾಗಿದೆ. ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಆದರೂ ಸಮಸ್ಯೆ ಪರಿಹಾರ ಕಂಡಿರಲಿಲ್ಲ. ಇದರಿಂದ ರೋಸಿ ಹೋಗಿದ್ದ ಶಿವಕುಮಾರ್ ಸ್ನೇಹಿತ ಸಾಗರ ಜತೆ ಸೇರಿ ಕೊಲೆ ಮಾಡಿದ್ದಾನೆ.

*ಎಣ್ಣೆ ಪಾರ್ಟಿಗೆ ಕರೆದು ಕೊಲೆ

ಶನಿವಾರ ರಾತ್ರಿ ಎಣ್ಣೆ ಪಾರ್ಟಿ ಮಾಡಲು ನಗರದ ಪೊಲೀಸ್ ಠಾಣೆಯ ಸಮೀಪ ಕರೆಸಿಕೊಂಡು ಶೇಖರ್‌ಗೆ ಮದ್ಯ ಕುಡಿಸಲಾಗಿದೆ. ಬಳಿಕ ಚಾಕುವಿನಿಂದ ಚುಚ್ಚಿದ್ದಲ್ಲದೇ ತಲೆಯ ಮೇಲೆ ಕಲ್ಲು ಹಾಕಿ, ಕೊಲೆ ಮಾಡಲಾಗಿದೆ.